ರಾಯಚೂರು: ರಾಜ್ಯದಲ್ಲಿ ಉಪ ಚುನಾವಣೆಯ ಕಾವು ಜೋರಾಗಿದ್ದು, ಜನರ ಮತಗಳನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ಕಸರತ್ತು ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ರಾಯಚೂರು ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪ್ರಖ್ಯಾತ ಗಾಯಕಿಯನ್ನೇ ಚುನಾವಣಾ ಪ್ರಚಾರಕ್ಕೆ ಕರೆತಂದಿದ್ದಾರೆ.
ನಿಮಗೆಲ್ಲ ನಟ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಕಣ್ಣು ಹೋಡಿಯಾಕಾ ಹಾಡಿನ ಬಗ್ಗೆ ತಿಳಿದಿದೆ. ಈ ಹಾಡು ಕನ್ನಡಕ್ಕಿಂತ ತೆಲಗಿನಲ್ಲೇ ಸದ್ದು ಮಾಡಿದ್ದು ಹೆಚ್ಚು. ಅದಕ್ಕೆ ಕಾರಣ ಗಾಯಕಿ ಮಂಗ್ಲಿ ಅವರ ಕಂಠಸಿರಿ.
ಮಂಗ್ಲಿ ಅವರು ಹಾಡಿದ "ಕಣ್ಣೇ ಅದಿರಿಂದಿ" ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಿಕ್ಕಾಪಟ್ಟೆ ಹಿಟ್ ಆಯಿತು. ವಿಶೇಷವೆಂದರೆ ಮಂಗ್ಲಿ ಅವರಿಗೆ ತುಂಬಾ ಜನಪ್ರಿಯವನ್ನು ಈ ಹಾಡು ತಂದುಕೊಟ್ಟಿದೆ. ಈ ಹಾಡಿನಿಂದ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಂಡಿರುವ ಮಂಗ್ಲಿ, ಕನ್ನಡಿಗರ ಮನೆ ಮಗಳಷ್ಟು ಚಿರಪರಿಚಿತರಾಗಿದ್ದಾರೆ.
ಹೀಗಾಗಿ ಮಂಗ್ಲಿ ಅವರನ್ನು ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಚುನಾವಣಾ ಪ್ರಚಾರಕ್ಕೆ ಆಹ್ವಾನಿಸಿದ್ದಾರೆ. ನಾಳೆ ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಂಡಾಗಳಲ್ಲಿ ಮಂಗ್ಲಿ ಅವರು ಪ್ರತಾಪ್ ಗೌಡ ಪರ ಮತಯಾಚನೆ ಮಾಡಲಿದ್ದಾರೆ. (ದಿಗ್ವಿಜಯ ನ್ಯೂಸ್)