ರಾಯಚೂರು: ಮಾನ್ವಿ ಪತ್ರಿಕಾ ಭವನದಲ್ಲಿ ಪತ್ರಕರ್ತ ಶರಣಬಸವ ನೀರಮಾನ್ವಿ ಮೇಲೆ ಹಲ್ಲೆಗೆ ಯತ್ನಿಸಿದ ಜನಶಕ್ತಿ ಕೇಂದ್ರ ರಾಜ್ಯಾಧ್ಯಕ್ಷ ಪ್ರಭುರಾಜ ಕೊಡ್ಲಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಡಿ.ಜೆ.ಹಳ್ಳಿ ಗಲಭೆ ಪ್ರಕರಣ ವರದಿಗೆ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಒತ್ತಾಯಿಸಿದೆ.
ಈ ಕುರಿತು ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬುಗೆ ಬುಧವಾರ ಮನವಿ ಸಲ್ಲಿಸಿ, ಪತ್ರಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಡೆಯಲು ಕಟ್ಟಿನಿಟ್ಟಿನ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಪ್ರಭುರಾಜ ಕೊಡ್ಲಿ ಸುದ್ದಿ ವಿಚಾರವಾಗಿ ಪತ್ರಕರ್ತ ಶರಣಬಸವ ನೀರಮಾನ್ವಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಹಲ್ಲೆಗೆ ಯತ್ನಿಸಿದ್ದು, ಜೀವ ಬೆದರಿಕೆ ಹಾಕಿದ್ದಾನೆ. ಜತೆಗೆ ಸಂಘದ ವಿರುದ್ಧ ಸಾಮಾಜಿಕ ಜಾಣಗಳಲ್ಲಿ ಅವಹೇಳನಕಾರಿ ಸಂದೇಶಗಳನ್ನು ಹಾಕಿದ್ದು, ಆತನ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು.
ಕಲಬುರಗಿಯಲ್ಲಿ ಪತ್ರಕರ್ತರ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲ ತಾಣದಲ್ಲಿ ಸಂದೇಶ ಹಾಕಿರುವ ಆರ್‌ಟಿಐ ಕಾರ್ಯಕರ್ತ ಸಿದ್ದು ಹಿರೇಮಠ ವಿರುದ್ಧ ಕ್ರಮಕೈಗೊಳ್ಳಬೇಕು. ನಕಲಿ ಪತ್ರಕರ್ತರ ಹಾವಳಿ ತಡೆಗಟ್ಟಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂಘದ ಜಿಲ್ಲಾಧ್ಯಕ್ಷ ಬಸವರಾಜ ನಾಗಡದಿನ್ನಿ, ಪ್ರಧಾನ ಕಾರ್ಯದರ್ಶಿ ಆರ್.ಗುರುನಾಥ, ಪತ್ರಕರ್ತರಾದ ವೆಂಕಟಸಿಂಗ್, ಶರಣಪ್ಪ ಬಾಚಲಾಪುರ, ದತ್ತು ಸರ್ಕಿಲ್, ಚನ್ನಬಸವ ಬಾಗಲವಾಡ, ತಾಯಪ್ಪ, ಹ್ಯಾರಿಸ್, ಜಗನ್ನಾಥ ಕುಲಕರ್ಣಿ, ವಿಜಯ ಜಾಗಟಗಲ್, ಮಹಾನಂದ, ಜಯಕುಮಾರ ದೇಸಾಯಿ ಇದ್ದರು.