ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮೈಸೂರಿನ ರಾಜಮನೆತನದ ರಾಜರು ಹಾಗೂ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್ ಅವರಿಗೆ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಿದರು. 
ಜಿಲ್ಲೆ

ಶ್ರೀಮಠದ ಇತಿಹಾಸದ ಪ್ರಮುಖ ದಿನ: ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ

ರಾಯಚೂರು: ಮೈಸೂರು ಸಂಸ್ಥಾನ 600 ವರ್ಷಕ್ಕೂ ಹೆಚ್ಚಿನ ಇತಿಹಾಸವನ್ನು ಹೊಂದಿದ್ದು, ಮೈಸೂರು ರಾಜಮನೆತನಕ್ಕೂ ಮತ್ತು ಮಂತ್ರಾಲಯದ ಶ್ರೀ ರಾಯರ ಮಠಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ ಹೇಳಿದರು.

ಮಂತ್ರಾಲಯದ ಶ್ರೀಮಠದ ಪ್ರಕಾರದಲ್ಲಿ ಹಮ್ಮಿಕೊಂಡಿದ್ದ ಮೈಸೂರು ರಾಜಮನೆತನದ ರಾಜರು ಹಾಗೂ ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್ ಅವರಿಗೆ ಅನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗುರುವಾರ ಅನುಗ್ರಹ ಸಂದೇಶ ನೀಡಿ ಮಾತನಾಡಿದರು.

ಮೈಸೂರು ರಾಜಮನೆತನ ಸೇವೆಗಳನ್ನು ಹಾಗೂ ಮನೆತನದ ಸಾಮಾಜಿಕ ಕಾರ್ಯಗಳನ್ನು ಪರಿಗಣಿಸಿ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಶ್ರೀಮಠದ ಹಾಗೂ ದೇಶದ ಇತಿಹಾಸದ ಪ್ರಮುಖ ದಿನವಾಗಿದೆ. ಹತ್ತು ಹಲವು ವಿಶೇಷತೆಗಳನ್ನು ಮೈಸೂರು ಸಂಸ್ಥಾನ ಒಳಗೊಂಡಿದೆ ಎಂದರು.

ಮೈಸೂರು ಸಂಸ್ಥಾನದಿಂದ ಶ್ರೀ ರಾಘವೇಂದ್ರ ಸ್ವಾಮಿಗಳನ್ನು ಶ್ರೀರಂಗಪಟ್ಟಣದ ದೇವಸ್ಥಾನಕ್ಕೆ ಕರೆಸಿ ಗೌರವಿಸಲಾಗುತ್ತಿತ್ತು. ಪರಂಪರಾಗತವಾಗಿ ಮೈಸೂರು ರಾಜಮನೆತನದ ಅತಿಥ್ಯವನ್ನು ಸ್ವೀಕರಿಸಲಾಗುತ್ತಿದೆ. ಪ್ರಜಾಪ್ರಭುತ್ವಕ್ಕೆ ಗೌರವಿಸಿ ರಾಜ್ಯದ ಆಡಳಿತವನ್ನು ಬಿಟ್ಟುಕೊಟ್ಟಿರುವ ಮೈಸೂರು ರಾಜಮನೆತನ ದೇಶದ ಹೆಮ್ಮೆಯ ರಾಜಮನೆತನವಾಗಿದೆ ಎಂದು ಹೇಳಿದರು.

ಮೈಸೂರು ರಾಜರಿಗೆ ನೀಡಲಾಗುತ್ತಿರುವುದು ಪ್ರಶಸ್ತಿಯಲ್ಲ ಶ್ರೇಯಸ್ಸಿನ ಪ್ರಾರ್ಥನೆಯಾಗಿದೆ. ಮೈಸೂರು ಸಂಸ್ಥಾನವು ಜನಪರ ಕಾಳಜಿಯನ್ನು ಹೊಂದುವ ಮೂಲಕ ಜನರ ಮನಸ್ಸಿನ ಹೃದಯದಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಮೈಸೂರು ರಾಜರು ಹಾಗೂ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ರಾಯರ ಮಠದಿಂದ ಅನುಗ್ರಹ ಪ್ರಶಸ್ತಿ ಪಡೆಯುತ್ತಿರುವುದು ಜೀವನದ ಅತಿದೊಡ್ಡ ಸೌಭಾಗ್ಯವಾಗಿದೆ. ಮಠದ ಪರಂಪರೆ ಶಾಶ್ವತವಾಗಿರಬೇಕು. ದೇಶಕ್ಕೆ ಮಠದ ಕೊಡುಗೆ ಅಪಾರವಾಗಿದೆ. ಮಠದಿಂದ ನೀಡಲಾದ ಸಂದೇಶಗನ್ನು ಪಾಲಿಸುವ ಮೂಲಕ ಉತ್ತಮ ದಾರಿಯಲ್ಲಿ ಪ್ರತಿಯೊಬ್ಬರು ನಡೆಯಬೇಕು ಈ ಪ್ರಶಸ್ತಿ ನನಗೆ ಸಿಕ್ಕಿಲ್ಲ ಇಡೀ ವಂಶಕ್ಕೆ ಪ್ರದಾನ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪಂಡಿತ ಕೇಸರಿ ಮಹಾ ಮಹೋಪಾಧ್ಯಾಯ ವಿದ್ವಾನ್ ಪೂಜ್ಯ ಡಾ.ರಾಜಾ ಶ್ರೀ ಗಿರಿಯಾಚಾರ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.