ರಾಯಚೂರು: ಮಂತ್ರಾಲಯ ಮಠದ ನದಿ ತಿರದಲ್ಲಿ ಭಕ್ತರ ಅನುಕೂಲಕ್ಕಾಗಿ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಶವರ್‌ಗಳು ಹಾಗೂ ಮಹಿಳೆಯರಿಗಾಗಿ ಬಟ್ಟೆ ಬದಲಾಯಿಸುವ ಪ್ರತ್ಯೇಕ ಕೋಣೆಗಳನ್ನು ನಿರ್ಮಿಸಲಾಗಿದೆ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ ಹೇಳಿದರು.
ಮಂತ್ರಾಲಯ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ತುಂಗಭದ್ರಾ ಜಲಾಶಯದ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಕ್ಷಣ ಕ್ಷಣಕ್ಕೂ ಮಾಹಿತಿಯನ್ನು ಪಡೆಯಲಾಗುತ್ತಿದೆ. ಮತ್ತು ಪ್ರಸ್ತುತ ಯಾವುದೇ ಪ್ರವಾಹದ ಭೀತಿ ಇಲ್ಲ ಇನ್ನೆರಡು ದಿನಗಳಲ್ಲಿ ಗೇಟ್ ದುರಸ್ತಿ ಕಾರ್ಯ ಮುಕ್ತಾಯವಾಗುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ನೀರಿನ ಹರಿವು ನಿಯಂತ್ರಣದಲ್ಲಿದೆ ಶ್ರೀಮಠದ ಭಕ್ತರು ನಿರಾತಂಕದಿಂದ ರಾಯರ ದರ್ಶನವನ್ನು ಪಡೆಯಬಹುದಾಗಿದೆ ಎಂದರು.
ಆಂದ್ರ ಪ್ರದೇಶದಲ್ಲಿ ಹೊಸ ಸರ್ಕಾರ ಆಡಳಿತಕ್ಕೆ ಬಂದಿದೆ. ಚಾತುರ್ಮಾಸ್ಯದ ವೃತದ ನಂತರ ಸರ್ಕಾರದಿಂದ ಮಠಕ್ಕೆ ಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಲಾಗುವುದು. ಆಯೋಧ್ಯೆಯಲ್ಲಿ ಮಾಸ್ಟರ್ ಪ್ಲಾನ್ ಹೊರತಾದ ಸ್ಥಳ ನೋಡಲಾಗುತ್ತಿದೆ. ಈಗಾಗಲೇ ಮೂರ‌್ನಾಲ್ಕು ಸ್ಥಳಗಳನ್ನು ನೋಡಲಾಗಿದೆ. ಚಾತುರ್ಮಾಸ್ಯದ ನಂತರ ಆಯೋಧ್ಯೆಗೆ ತೆರಳಿ ಮಠ ಸ್ಥಾಪನೆಗೆ ಸ್ಥಳ ನಿಗದಿ ಮಾಡಲಾಗುವುದು ಎಂದರು.
ಈಗಾಗಲೇ ಹರಿದ್ವಾರದಲ್ಲಿ ಗಂಗಾತೀರದಲ್ಲಿ ಸುಸ್ಸಜಿತವಾದ ಮಠವನ್ನು ನಿರ್ಮಾಣ ಮಾಡಲಾಗಿದೆ. ಅಲ್ಲಿಗೆ ಬರುವ ಯಾತ್ರಿಗಳಿಗೆ ಅನ್ನದಾನ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿದೆ ಚಾತುರ್ಮಾಸ್ಯದ ನಂತರ ರಾಘವೇಂದ್ರ ಸ್ವಾಮಿಗಳ ಬೃಂದಾವನವನ್ನು ಪ್ರತಿಷ್ಠಾಪನೆ ಮಾಡಲಾಗುವುದು ಎಂದು ತಿಳಿಸಿದರು.
ಮಂತ್ರಾಲಯದಲ್ಲಿ ಬಡಜನರಿಗೆ ಸೌಕರ್ಯ ದೊರೆಯುತ್ತಿಲ್ಲ ಎನ್ನುವುದು ಸತ್ಯಕ್ಕೆ ದೂರವಾದ ವಿಷಯವಾಗಿದೆ. ಜಾತ್ಯಾತೀತ ಭಕ್ತರನ್ನು ಹೊಂದಿರುವ ವಿಶ್ವದ ಏಕೈಕ ಮಠ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠವಾಗಿದ್ದು, ಬಡವರು ಶ್ರೀಮಂತರೆಂಬ ಬೇದವಿಲ್ಲ ಎಲ್ಲರೂ ಶ್ರೀಮಠಕ್ಕೆ ಸಮಾನರು, ರಾಯರ ಭಕ್ತರೆಂದು ಅವರನ್ನು ಗುರುತಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಮಂತ್ರಾಲಯ ಬಸ್ ನಿಲ್ದಾಣದ ಅವ್ಯವಸ್ಥೆಯ ಕುರಿತು ಮಾಹಿತಿ ಇದ್ದು, ಸರ್ಕಾರ ಒಪ್ಪಿದ್ದಲ್ಲಿ ಬಸ್ ನಿಲ್ದಾಣವನ್ನು ಪುನರ್‌ನಿರ್ಮಾಣ ಮಾಡಲು ಮಠ ಸಿದ್ದವಾಗಿದೆ.
15 ಕೋಟಿ ಅನುದಾನದಲ್ಲಿ ಸಮಗ್ರ ಮಂತ್ರಾಲಯದಲ್ಲಿ ಪಿಸಿಎಸ್ ಕಂಪನಿಯ ಸಿಎಸ್‌ಆರ್ ಅನುದಾನದಲ್ಲಿ ಡ್ರೈನೇಜ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು.