ರಾಯಚೂರು: ಮಂತ್ರಾಲಯ ಕ್ಷೇತ್ರದಲ್ಲಿ ಶಾಶ್ವತ ಒಳಚರಂಡಿ ವ್ಯವಸ್ಥೆಯನ್ನು ಮಾಡಲು 13 ಕೋಟಿ ರೂ.ಗೂ ಹೆಚ್ಚಿನ ಮೊತ್ತದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರಿಂದ ಮಂತ್ರಾಲಯದ ಭಕ್ತರಿಗೆ, ಸುತ್ತಮುತ್ತಲಿನ ಜನರಿಗೆ ಉಪಯೋಗವಾಗಲಿದೆ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.
ಮಂತ್ರಾಲಯದಲ್ಲಿ ಟಾಟಾ ಸನ್ಸ್ ಕಂಪನಿಯಿಂದ ಕೈಗೆತ್ತಿಕೊಳ್ಳಲಾದ ಒಳಚರಂಡಿ ವ್ಯವಸ್ಥೆಯ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮಂತ್ರಾಲಯದಲ್ಲಿ ಶಾಶ್ವತ ಒಳಚರಂಡಿ ವ್ಯವಸ್ಥೆ ಮಾಡಲಾಗುತ್ತಿದೆ. ಮಂತ್ರಾಲಯಕ್ಕೆ ಬರುವ ಭಕ್ತರು ಹಾಗೂ ಕ್ಷೇತ್ರದ ಜನರು ಮಂತ್ರಾಲಯವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ತ್ಯಾಜ್ಯಗಳನ್ನು ಒಳಚರಂಡಿಗೆ ಬಿಡದೇ ಕಸದಬುಟ್ಟಿಗಳಿಗೆ ಹಾಕುವ ಮೂಲಕ ಸ್ವಚ್ಛತೆಯನ್ನು ಕಾಪಾಡಬೇಕು ಮತ್ತು ಜಾಗೃತರಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಒಳಚರಂಡಿ ಕಾಮಗಾರಿಗಳ ತಜ್ಞ ರಂಗನಾಥ, ಮಠದ ಇಂಜಿನೀಯರಿಂಗ್ ವಿಭಾಗದ ಮುಖ್ಯಸ್ಥ ಸುರೇಶ ಸೇರಿದಂತೆ ಮಠದ ಅಧಿಕಾರಿಗಳು, ಸಿಬ್ಬಂದಿ ಇದ್ದರು.