ರಾಯಚೂರು: ಭಾರತ-ಚೀನಾ ಸಂಘರ್ಷ ಹಿನ್ನೆಲೆಯಲ್ಲಿ ಮಸ್ಕಿಯ ಗೃಹ ರಕ್ಷಕ ದಳದ ಸಿಬ್ಬಂದಿ ಲಕ್ಷ್ಮಣ ಮಡಿವಾಳ ಎಂಬುವರು ರಾಷ್ಟಪತಿಗಳಿಗೆ ರಕ್ತದಲ್ಲಿ ಪತ್ರ ಬರೆದು ಗಡಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.
ದೇಶ ಸೇವೆಗಾಗಿ ನನ್ನ ರಕ್ತ ಕುದಿಯುತ್ತಿದೆ. ಗಾಲ್ವಾನ್ ಪ್ರದೇಶದಲ್ಲಿ ಕುತಂತ್ರ ಬುದ್ಧಿಯಿಂದ ಚೀನಿಯರು ನಮ್ಮ ಸೈನಿಕರನ್ನು ಹತ್ಯೆ ಮಾಡಿದ್ದಾರೆ. ನಮ್ಮ ಸೈನಿಕರು ಹುತಾತ್ಮರಾದಾಗಿನಿಂದ ನನಗೆ ಸರಿಯಾಗಿ ನಿದ್ದೆ ಬರ್ತಿಲ್ಲ. ಪ್ರತೀಕಾರ ತೀರಿಸಿಕೊಳ್ಳಲು ನನಗೆ ಸೇನೆಯ ಗಡಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿ ಕೊಡಿ ಎಂದು ರಕ್ತದಲ್ಲಿ ಪತ್ರ ಬರೆಯುವ ಮೂಲಕ ರಾಷ್ಟ್ರಪತಿಗಳನ್ನು ಕೋರಿದ್ದಾರೆ. ಇದನ್ನೂ ಓದಿ: VIDEO| ನಮ್ಮ ಯೋಧರನ್ನು ಕೊಂದ ಚೀನಾಗೆ ಪಾಠ ಕಲಿಸಲು ಗಡಿಯತ್ತ ಬಾಲಕರ ಪ್ರಯಾಣ: ಮುಂದೇನಾಯ್ತು?
ಕಳೆದ ಸೋಮವಾರ ರಾತ್ರಿ ಭಾರತ ಮತ್ತು ಚೀನಾ ನಡುವೆ ಲಡಾಖ್ ಗಡಿಯ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾದರು. ಚೀನಾದ 35 ಯೋಧರನ್ನು ಸಹ ನಮ್ಮ ಸೇನೆ ಹೊಡೆದುರುಳಿಸಿತು. ಇದು ಐದು ದಶಕಗಳ ಬಳಿಕ ನಡೆದ ಬಹುದೊಡ್ಡ ಘರ್ಷಣೆಯಂದೇ ಹೇಳಲಾಗುತ್ತಿದೆ.
1967ರಲ್ಲಿ ನಾಥು ಲಾ ಗಡಿಯಲ್ಲಿ ಈ ರೀತಿಯ ಘರ್ಷಣೆ ಉಭಯ ದೇಶಗಳ ನಡುವೆ ನಡೆದಿತ್ತು. ಈ ವೇಳೆ ಭಾರತದ 80 ಯೋಧರು ಮತ್ತು ಚೀನಾದ 300 ಸೈನಿಕರು ಸಾವಿಗೀಡಾಗಿದ್ದರು. ಕಳೆದ ಸೋಮವಾರ ನಡೆದ ಘರ್ಷಣೆಯ ಬಳಿಕ ಗಡಿಯಲ್ಲಿ ಭಾರಿ ಉದ್ವಿಘ್ನತೆ ನೆಲೆಸಿತ್ತು. ಇದರ ಮಧ್ಯೆ ಉಭಯ ರಾಷ್ಟ್ರಗಳ ನಾಯಕರ ನಡುವೆ ಮಾತುಕತೆ ನಡೆದಿದ್ದು, ಪರಿಸ್ಥಿತಿ ತಿಳಿಯಾಗಿದೆ. (ದಿಗ್ವಿಜಯ ನ್ಯೂಸ್) ಇದನ್ನೂ ಓದಿ: ವ್ಹೀಲಿಂಗ್ ಮಾಡುವಾಗ ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿ ಮೂವರ ಸಾವು