ರಾಯಚೂರು: ಕೇಂದ್ರ ಸರ್ಕಾರ ಭಾರತೀಯ ಜೀವ ವಿಮಾ ಸಂಸ್ಥೆ ದುರ್ಬಲಗೊಳಿಸುವ ನಿಟ್ಟಿನಲ್ಲಿ ನಿಗಮದಲ್ಲಿನ ಬಂಡವಾಳದ ಸ್ಪಲ್ಪ ಭಾಗ ಷೇರು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಐಪಿಒ ಪ್ರಕ್ರಿಯೆ ಆರಂಭಿಸಿದೆ ಎಂದು ವಿಮಾ ನೌಕರರ ಸಂಘದ ರಾಯಚೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಎಂ.ರವಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಇದು ವಿಮಾ ಉದ್ದಿಮೆಯ ರಾಷ್ಟ್ರೀಕರಣದ ಮೂಲ ಉದ್ದೇಶ ನಾಶಪಡಿಸುವ ಕುತಂತ್ರವಾಗಿದೆ. ಕೇಂದ್ರ ಸರ್ಕಾರ ಕೂಡಲೇ ಐಪಿಒ ಪ್ರಕ್ರಿಯೆ ಕೈಬಿಡಬೇಕು ಎಂದು ಒತ್ತಾಯಿಸಿದರು.
ಕೇವಲ 5 ಕೋಟಿ ರೂ. ಬಂಡವಾಳದೊಂದಿಗೆ 1956ರಲ್ಲಿ ಆರಂಭವಾದ ಸಂಸ್ಥೆ 32 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿ ಹೊಂದಿದೆ. ಸರ್ಕಾರಕ್ಕೆ 26 ಸಾವಿರ ಕೋಟಿ ರೂ.ಗಿಂತಲೂ ಅಧಿಕ ಲಾಭಾಂಶ ನೀಡುತ್ತಾ ಬಂದಿದೆ. 40 ಕೋಟಿ ಪಾಲಸಿದಾರರ ವಿಶ್ವಾಸ ಉಳಿಸಿಕೊಂಡಿದೆ.
ಪಾಲಸಿದಾರರ ಹಣಕ್ಕೆ ಸುಭದ್ರತೆ ಕಲ್ಪಿಸುವುದು ಸಂಸ್ಥೆಯ ಮೂಲ ಉದ್ದೇಶಕ್ಕೆ ಐಪಿಒ ಪ್ರಕ್ರಿಯೆ ಧಕ್ಕೆ ತರಲಿದ್ದು, ಎಲ್‌ಐಸಿಗೆ ಯಾವುದೇ ಬಂಡವಾಳದ ಅವಶ್ಯತೆಯಿಲ್ಲ. ಪಾಲಸಿದಾರರಿಗೆ ಕಳೆದ ವರ್ಷದ 51 ಸಾವಿರ ಕೋಟಿ ರೂ. ನೀಡಿದೆ.
ಐಪಿಒ ಪ್ರಕ್ರಿಯೆ ಅಂತಿಮವಾಗಿ ಸಂಸ್ಥೆಯ ಖಾಸಗೀಕರಣಕ್ಕೆ ದಾರಿ ಮಾಡಿಕೊಡುತ್ತಿದ್ದು, ಜನರ ಹಣ ಜನಕಲ್ಯಾಣಕ್ಕೆ ಎನ್ನುವ ಬದಲಾಗಿ ಷೇರುದಾರರಿಗೆ ಗರಿಷ್ಟ ಲಾಭ ಎನ್ನುವುದಕ್ಕೆ ಎಡೆ ಮಾಡಿಕೊಡಲಿದೆ. ಇದರಿಂದ ಜನ ಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲದ ಕಾರಣ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಎಂ.ರವಿ ಆಗ್ರಹಿಸಿದರು.
ಸಂಘದ ಪದಾಧಿಕಾರಿಗಳಾದ ಶರಣಗೌಡ, ಶ್ರೀಧರ, ಪಿ.ಗುರುರಾಜ್, ಡಿ.ಬಿ.ಕಟ್ಟಿಮನಿ ಉಪಸ್ಥಿತರಿದ್ದರು.