ಜಿಲ್ಲೆ

ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಿ: ನಿರ್ಮಲಾ

Gangavati - Shashidhara Shashidhara

ರಾಯಚೂರು: ಓದುವ ಆಸಕ್ತಿ ಉಳ್ಳವರು ಸಾರ್ವಜನಿಕರಿಗಾಗಿ ಇರುವ ಗ್ರಂಥಾಲಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಯಚೂರು ಕೇಂದ್ರ ಗ್ರಂಥಾಲಯದ ಅಧಿಕಾರಿ ಎಚ್.ನಿರ್ಮಲಾ ಹೊಸೂರು ಹೇಳಿದರು.

ನಗರದ ಕೇಂದ್ರ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಗುರುವಾರ ಮಾತನಾಡಿದರು.

ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಹೆಚ್ಚು ಬೆಳೆಸಿಕೊಳ್ಳಬೇಕು. ನಗರ ಗ್ರಂಥಾಲಯದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಹೆಚ್ಚು ಜ್ಞಾನವಂತರಾಗಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ವೇಳೆ ಪುಸ್ತಕ ಪ್ರದರ್ಶನ ಹಾಗೂ ನಗರದ ಬಾಲಕಿಯರ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿನಿಯರಿಗೆ ಗಾಯನ, ಪ್ರಬಂಧ, ಚಿತ್ರಕಲೆ ಸೇರಿದಂತೆ ಇನ್ನಿತರ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಸಹಾಯಕ ಗ್ರಂಥಪಾಲಕ ಕೆ.ರಾಘವೇಂದ್ರ ರಾವ್, ಗ್ರಂಥಾಲಯ ಸಹಾಯಕ ಮಾರೆಪ್ಪ, ಬೆರಳಚ್ಚುಗಾರರಾದ ಎಸ್.ರಾಜಶ್ರೀ, ಈರಮ್ಮ, ಶಿವಲೀಲಾ, ಶೀಘ್ರಲಿಪಿಗಾರ್ತಿ ಸಣ್ಣ ತಿಮಲಮ್ಮ, ಗ್ರಂಥಾಲಯ ಸಿಬ್ಬಂದಿ ಪಾಂಡುರಂಗ, ವಿನೋದ, ಬಸವರೆಡ್ಡೆಪ್ಪ ಸೇರಿದಂತೆ ಇತರರು ಇದ್ದರು.