ಜಿಲ್ಲೆ

ಶರಣರ ಚಿಂತನೆಗಳನ್ನು ಸಾಕಾರಗೊಳಿಸೋಣ

ರುದ್ರಪ್ಪ ವಾಲಿ

ರಾಯಚೂರು: ಸಮ ಸಮಾಜ ನಿರ್ಮಾಣಕ್ಕೆ ಶಿವಶರಣರ ವಚನಗಳು ಮತ್ತು ಬೋಧನೆಗಳು ನಮಗೆ ಪ್ರೇರಣೆಯಾಗಿವೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಕೆ.ಶಾಂತಪ್ಪ ಹೇಳಿದರು.

ಕರ್ನಾಟಕ ಸಂಘದ ಸಭಾಂಗಣದಲ್ಲಿ ಶರಣ ಚಿಂತನ-ಮಂಥನ ಮಾಸಿಕ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಭಾನುವಾರ ಮಾತನಾಡಿದರು. ಶರಣರ ಚಿಂತನೆಗಳನ್ನು ಸಾಕಾರಗೊಳಿಸಲು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕಿದೆ ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಿರ್ಜಾಪುರ ವಚನಕಾರ ಅಲ್ಲಮಪ್ರಭು ಚಿತ್ರ ಅನಾವರಣಗೊಳಿಸಿ ಮಾತನಾಡಿ, ಅಲ್ಲಮಪ್ರಭುಗಳ ಆಳವಾದ ಆಧ್ಯಾತ್ಮ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಸಂಘದ ನಿಕಟಪೂರ್ವ ಅಧ್ಯಕ್ಷ ನರಸಣ್ಣ ಮಾತನಾಡಿ, ಶಿವಶರಣರ ಅನುಭವ ಮಂಟಪದ ನೆಲೆಗಟ್ಟಿನಲ್ಲಿಯೇ ನಮ್ಮ ಸಂವಿಧಾನವನ್ನು ರಚಿಸಲಾಗಿದ್ದು, ಸಂವಿಧಾನದ ಆಶಯಗಳನ್ನು ಕಾಪಾಡಬೇಕು ಎಂದು ಹೇಳಿದರು.

ಚಿತ್ರಕಲಾವಿದರಾದ ಚಾಂದ್ ಪಾಷಾ, ಎಚ್.ಎಚ್.ಮ್ಯಾದಾರ್ ಅವರನ್ನು ಸನ್ಮಾನಿಸಲಾಯಿತು. ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು, ನಿವೃತ್ತ ಪ್ರಾಚಾರ್ಯ ಡಾ.ಪರಮೇಶ್ವರ ಸಾಲಿಮಠ, ಸಂಘದ ಕಾರ್ಯದರ್ಶಿ ಮುರಳೀಧರ ಕುಲಕರ್ಣಿ, ಸಾಹಿತಿ ವೀರ ಹನುಮಾನ, ಶ್ರೀನಿವಾಸ ಗಟ್ಟು, ಜಿ.ಹನುಮಂತಪ್ಪ, ದೇವೇಂದ್ರಮ್ಮ, ಪಾರ್ವತಿ ಅಳ್ಳೊಳ್ಳಿ, ಅಶ್ವಿನಿ ಮಟ್ಟೂರು ಉಪಸ್ಥಿತರಿದ್ದರು.