ರಾಯಚೂರು: ಭೂಮಿ ಮತ್ತು ವಸತಿ ರಹಿತರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಹೋರಾಟ ರೂಪಿಸುವ ನಿಟ್ಟಿನಲ್ಲಿ ನಗರದ ಮಾದಾರ ಚನ್ನಯ್ಯ ಸಭಾಭವನದಲ್ಲಿ ಸೆ.26ರ ಮಧ್ಯಾಹ್ನ 3ಕ್ಕೆ ಬಗರ್‌ಹುಕುಂ ಸಾಗುವಳಿದಾರರು ಹಾಗೂ ಹೋರಾಟಗಾರರ ಸಭೆಯನ್ನು ಕರೆಯಲಾಗಿದೆ ಎಂದು ಭೂಮಿ ವಸತಿ ಹೋರಾಟ ಸಮಿತಿ ಸಂಚಾಲಕ ಮಾರೆಪ್ಪ ಹರವಿ ತಿಳಿಸಿದರು.
ಭೂಮಿಗಾಗಿ ಫಾರಂ ನಂ.50, 53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿದವರು, ವಸತಿಗಾಗಿ 94ಸಿ, 94ಸಿಸಿ ಹಾಗೂ ಅರಣ್ಯ ಹಕ್ಕು ಕಾಯ್ದೆಯನ್ವಯ ಅರ್ಜಿ ಸಲ್ಲಿಸಿದವರು ಸಭೆಯಲ್ಲಿ ಭಾಗವಹಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎರಡ್ಮೂರು ತಲೆಮಾರುಗಳಿಂದ ಸರ್ಕಾರಿ, ಗೋಮಾಳ, ಖರಾಬು ಭೂಮಿಗಳಲ್ಲಿ ಸಾಗುವಳಿ ಮಾಡುತ್ತಿರುವ ಸಾವಿರಾರು ಕುಟುಂಬಗಳು ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಸರ್ಕಾರದಿಂದ ಮಂಜೂರಾತಿ ದೊರೆಯುತ್ತಿಲ್ಲ. ಇದಕ್ಕಾಗಿ ಸರ್ಕಾರಿ ಕಚೇರಿಗೆ ಅಲೆದು ಸಾಕಾಗಿದೆ. ಸರ್ಕಾರ ರೈತರು, ಬಡ ಜನರಿಗೆ ಭೂಮಿ ಮಂಜೂರು ಮಾಡದೆ ಕಾರ್ಪೋರೇಟ್ ಸಂಸ್ಥೆಗಳು, ಆರ್ಥಿಕವಾಗಿ ಸದೃಢವಾಗಿರುವವರಿಗೆ ಸರ್ಕಾರಿ ಭೂಮಿಗಳನ್ನು ನೀಡುತ್ತಿವೆ. ಈ ನಿಟ್ಟಿನಲ್ಲಿ ಹೋರಾಟದ ಕಾರ್ಯಕ್ರಮದ ರೂಪುರೇಷೆ ನಿರ್ಧರಿಸಲು ಸಭೆ ಕರೆಯಲಾಗಿದೆ ಎಂದರು. ಸಮಿತಿ ಪದಾಧಿಕಾರಿಗಳಾದ ಷಣ್ಮುಖಪ್ಪ ಘಂಟಿ, ಆಂಜನೇಯ, ಮುದಕಪ್ಪ ನಾಯಕ, ರಾಘವೇಂದ್ರ ಇದ್ದರು.