ರಾಯಚೂರು: ಒಂದೆಡೆ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಜನರು ಬೇಸತ್ತಿದ್ದು, ಜು.24ರವರೆಗೆ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ ಮತ್ತೊಂದೆಡೆ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಜಿಲ್ಲೆಯ ನದಿ ಪಾತ್ರದ ಜನರಿಗೆ ಪ್ರವಾಹದ ಬೀತಿ ಎದುರಾಗಿದೆ.
ಮುಂದಿನ ಐದು ದಿನಗಳಲ್ಲಿ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಜು.12ರಿಂದ 18ರವರೆಗೆ 25 ಮಿ.ಮೀ ಮಳೆಯಾಗಬೇಕಿತ್ತು ಆದರೆ 28 ಮಿ,ಮೀ ಮಳೆಯಾಗಿದೆ. ರಾಯಚೂರು ಜಿಲ್ಲೆಯಲ್ಲಿ ಜು.20ರಂದು 8 ಮಿ.ಮೀ ಮಳೆಯಾಗಿದ್ದು, 21ಕ್ಕೆ 10 ಮಿ,ಮೀ ಮಳೆಯಾಗಲಿದೆ.
22ಕ್ಕೆ 22 ಮಿ.ಮೀ ಮಳೆಯಾಗಲಿದ್ದು, 23ಕ್ಕೆ ಮಳೆಯ ಪ್ರಮಾಣ ಕಡಿಮೆಯಾಗಿ 3 ಮಿ.ಮೀಗೆ ತಗ್ಗಲಿದೆ. ಮಳೆಯು ನಿರಂತರವಾಗಿ ಮುಂದುವರೆದು ಜು.24ಕ್ಕೆ 3 ಮಿ.ಮೀ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆಯ ಮಾಹಿತಿಯಿಂದ ತಿಳಿದುಬಂದಿದೆ.
ಇದನ್ನೂ ಓದಿ: Heavy Rain Floods Sugarcane Field In Rayara Kere | ಸತತ ಮಳೆಯಿಂದ ಕಬ್ಬಿನ ಗದ್ದೆ ಜಲಾವೃತ | VIJAYANAGARA
ಜು.20ರಂದು 2 ಮಿ.ಮೀ ವಾಡಿಕೆಯ ಮಳೆಯಾಗಬೇಕತ್ತು ಆದರೆ 8 ಮಿ.ಮೀ ಮಳೆಯಾಗುವ ಮೂಲಕ ಮಳೆಯ ಪ್ರಮಾಣ ಹೆಚ್ಚಿದೆ. ಬಿಟ್ಟು ಬಿಡೆದೇ ಸುರಿಯುತ್ತಿರುವ ಮಳೆಗೆ ಜನರು ಬೇಸತ್ತು ಹೋಗಿದ್ದಾರೆ.
ಒಂದು ಕಡೆ ಜಿಟಿ ಜಿಟಿ ಮಳೆಯಾಗುತ್ತಿದ್ದು, ಮತ್ತೊಂದೆಡೆ ನಾರಾಯಣಪುರ ಜಲಾಶಯದಲ್ಲಿ ಜು.20ರ ಮದ್ಯಾಹ್ನ 3 ಗಂಟೆಯ ಹೊತ್ತಿಗೆ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದ್ದು, ಜಲಾಶಯದ 22 ಗೇಟ್‌ಗಳನ್ನು ತೆಗೆದು 99.22 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ.
ನಾರಾಯಣಪುರ ಜಲಾಶಯ 33.313 ಟಿಎಂಸಿ ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ ಆದರೆ ಈಗಾಗಲೇ 29.701 ಟಿಎಂಸಿ ನೀರು ಸಂಗ್ರಹವಾಗಿದ್ದು, ಶೇ.89.15ರಷ್ಟು ಜಲಾಶಯ ಭರ್ತಿಯಾಗಿದೆ.
ಈಗಾಗಲೇ ಜಿಲ್ಲಾಡಳಿತ ಎನ್.ಡಿ.ಆರ್.ಎ್ ತಂಡ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರವಾಹ ಪರಿಸ್ಥಿತಿಯನ್ನು ಎದುರಿಸಬಹುದಾದ ಗ್ರಾಮಗಳ ಜನರ ರಕ್ಷಣೆಗೆ ಸಿದ್ದತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದು, ಅಧಿಕಾರಿಗಳು ನದಿ ಪಾತ್ರದ ಗ್ರಾಮಗಳಲ್ಲಿ ಬೀಡು ಬಿಟ್ಟಿದ್ದಾರೆ.
ಜಿಲ್ಲಾ, ತಾಲೂಕು, ಹೋಬಳಿ ಹಾಗೂ ಗ್ರಾಮ ಪಂಚಾಯತ್ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಪ್ರವಾಹ ಮತ್ತು ಮಳೆಯಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಗೆ ವಹಿಸಲು ಸೂಚನೆ ನೀಡಲಾಗಿದೆ.
ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ದೇವದುರ್ಗ ತಾಲೂಕಿನ ಹೂವಿನಹೆಡಗಿ ಗ್ರಾಮದ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಮುಳುಗಡೆಯಾಗಿದೆ. ಜು.20ರಂದು ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿರುವ ಕಾರಣ ನದಿ ದಂಡೆಯ ಮೇಲಿರುವ ದೇವಸ್ಥಾನ ಮುಳುಗಡೆಯಾಗಿದೆ.