ನಾಗನಗೌಡ ಪೊಲೀಸ್ ಪಾಟೀಲ್  
ಜಿಲ್ಲೆ

ಕಟ್ಟಡ ನಿರ್ಮಿಸಿದ್ದರೂ ಬಳಕೆಗೆ ನೀಡುತ್ತಿಲ್ಲ


ರಾಯಚೂರು: ದೇವದುರ್ಗ ತಾಲೂಕಿನ ಕೊತ್ತದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿರುವ ಕಟ್ಟಡವನ್ನು ಶಾಲೆಯ ಬಳಕೆಗೆ ನೀಡಬೇಕು ಎಂದು ಎಸ್‌ಡಿಎಂಸಿ ಸದಸ್ಯ ನಾಗನಗೌಡ ಪೊಲೀಸ್ ಪಾಟೀಲ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಎರಡು ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡು ಹಲವು ತಿಂಗಳು ಕಳೆದರೂ ಬಳಕೆಗೆ ನೀಡಿಲ್ಲ. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಾಸಕಗೆ ಹಲವು ಬಾರಿ ಮನವಿ ಮಾಡಿದರೂ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ದೂರಿದರು.

ಕೊಠಡಿ ಇಲ್ಲದ ಕಾರಣಕ್ಕೆ 1 ರಿಂದ 7ನೇ ತರಗತಿ ಮಕ್ಕಳಿಗೆ ಉರ್ದು ಶಾಲೆಯ ಕಟ್ಟಡದಲ್ಲಿ ಪಾಠ ಮಾಡಲಾಗುತ್ತಿದೆ. ಮಳೆಗಾಲದಿಂದಾಗಿ ಉರ್ದು ಶಾಲೆಯಲ್ಲೂ ಸ್ಥಳಾವಕಾಶದ ಕೊರತೆಯಾಗಲಿದೆ. ಶಾಲೆಯಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರೂ ಇಬ್ಬರು ಶಿಕ್ಷಕರಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸಮರ್ಪಕ ಶಿಕ್ಷಣ ಸಿಗದಂತಾಗಿದೆ. ಒಂದು ವಾರದೊಳಗೆ ಕಟ್ಟಡ ಬಳಕೆಗೆ ಅವಕಾಶ ನೀಡದಿದ್ದರೆ ವಿದ್ಯಾರ್ಥಿಗಳೊಂದಿಗೆ ಹೋರಾಟ ನಡೆಸಲಾಗುವುದು ಎಂದು ನಾಗನಗೌಡ ಪೊಲೀಸ್ ಪಾಟೀಲ್ ತಿಳಿಸಿದರು. ಗ್ರಾಮದ ಮುಖಂಡ ಹನುಮೇಶ ಮಟ್ಟೂರು ಉಪಸ್ಥಿತರಿದ್ದರು.