ಜಿಲ್ಲೆ

ರೈಸ್‌ಮಿಲ್ ಮಾಲೀಕನ ಕಿಡ್ನಾಪ್ ಯತ್ನ: ಐವರ ಬಂಧನ, ಹಣಕ್ಕಾಗಿ ಕೃತ್ಯ

ರಾಯಚೂರು: ಹಣದ ಬೇಡಿಕೆಯಿಟ್ಟು ರೈಸ್‌ಮಿಲ್ ಮಾಲೀಕನನ್ನು ಅಪಹರಿಸಲು ಯತ್ನಿಸಿದ ಐವರು ದರೋಡೆಕೋರರನ್ನು ಪೊಲೀಸರು ಬಂಧಿಸಿರುವ ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ರಿಯಾಜ್‌ಪಾಷಾ, ಶೇಖ್ ಮುಕ್ತಿಯಾರ್, ಗುರುರಾಜ್, ಶೇಖ್ ಅಬ್ದುಲ್ಲಾ ಹಾಗೂ ಗುರುಕುಮಾರ್ ಬಂಧಿತರು. ನಗರದ ಹೈದರಾಬಾದ್ ರಸ್ತೆಯಲ್ಲಿರುವ ಸತ್ಯನಾರಾಯಣ ರೈಸ್‌ಮಿಲ್ ಮಾಲೀಕ ಆರ್.ನರೇಂದ್ರ ಕುಮಾರ್ ಸೆ.11ರ ಸಂಜೆ ರೈಸ್‌ಮಿಲ್‌ನಿಂದ ಮನೆಗೆ ಹೋಗುವಾಗ ಐವರು ದರೋಡೆಕೋರರು ಅಪಘಾತವಾಗಿದೆ ಎಂದು ನಟಿಸಿ ಕಾರನ್ನು ನಿಲ್ಲಿಸಿದ್ದಾರೆ.

ಅದೇ ಕಾರಿನಲ್ಲಿ ಕೂತು, ಚಾಕು ತೋರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಕಾರಿನಲ್ಲಿ ಐವತ್ತು ಸಾವಿರ ರೂ. ಇದೆ, ಅದನ್ನೇ ತೆಗೆದುಕೊಳ್ಳಿ ಎಂದು ದರೋಡೆಕೋರರಿಗೆ ನರೇಂದ್ರ ಕುಮಾರ್ ತಿಳಿಸಿದ್ದಾರೆ. ಇದಕ್ಕೆ ತೃಪ್ತರಾಗದ ದರೋಡೆಕೋರರು ತಾವು ತಂದಿದ್ದ ಬೈಕಿನಲ್ಲಿ ನರೇಂದ್ರ ಅವರನ್ನು ಸ್ವಲ್ಪ ದೂರ ಕರೆದೊಯ್ದು, ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಕಾರಿನಲ್ಲಿ ಇರೋದೇ ಐವತ್ತು ಸಾವಿರ ರೂ. ಅದನ್ನೇ ತೆಗೆದುಕೊಳ್ಳಿ ಎಂದು ನರೇಂದ್ರ ಪುರುಚ್ಛಿಸಿದ್ದಾರೆ. ಆಗ ದರೋಡೆಕೋರರು ಬೈಕ್‌ನಲ್ಲಿ ಕಾರಿದ್ದ ಸ್ಥಳಕ್ಕೆ ಬಂದಿದ್ದಾರೆ. ಸಮೀಪದಲ್ಲೇ ಇದ್ದ ರೈಸ್‌ಮಿಲ್ ಕಾರ್ಮಿಕರು ಅನುಮಾನ ಬಂದು, ಓಡಿಬಂದು ಆರೋಪಿಗಳನ್ನು ಹಿಡಿದಿದ್ದಾರೆ. ಅದೇ ಸಮಯದಲ್ಲಿ ಗಸ್ತಿನಲ್ಲಿದ್ದ ಪೊಲೀಸರು ಸಹ ಆರೋಪಿಗಳನ್ನು ಬಂಧಿಸಿ ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಹಣಕ್ಕಾಗಿ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.