ಜಿಲ್ಲೆ

ವೇತನ ಖಾತ್ರಿಗೆ ವಸತಿ ನೌಕರರ ಒತ್ತಾಯ

ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದ ಗುತ್ತಿಗೆ ನೌಕರರ ಸಂಘದಿಂದ ಡಿಸಿಗೆ ಮನವಿ

ರಾಯಚೂರು: ಲಾಕ್‌ಡೌನ್‌ನಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ ಮತ್ತು ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಜೂನ್ ತಿಂಗಳಿಂದ ವೇತನ ಖಾತ್ರಿ ಪಡಿಸಬೇಕು ಎಂದು ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ ಗುತ್ತಿಗೆ ನೌಕರರ ಸಂಘ ಒತ್ತಾಯಿಸಿದೆ.

ಸಂಘದ ನಿಯೋಗ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಮಲ್ಲಿಕಾರ್ಜುನಗೆ ಸೋಮವಾರ ಮನವಿ ಸಲ್ಲಿಸಿ, ಲಾಕ್‌ಡೌನ್ ಅವಧಿಯಲ್ಲಿ ವೇತನ ನೀಡಬೇಕು. ಎಲ್ಲ ನೌಕರರಿಗೆ 3 ತಿಂಗಳ ಪಡಿತರ ವಿತರಣೆ ಮಾಡಬೇಕು ಎಂದು ಆಗ್ರಹಿಸಿತು.

ಹೊರಗುತ್ತಿಗೆ ಸಿಬ್ಬಂದಿಗೆ ವರ್ಷದ 10 ತಿಂಗಳು ಮಾತ್ರ ವೇತನ ನೀಡಲಾಗುತ್ತಿದೆ. ಪ್ರತಿ ವರ್ಷ ಏಪ್ರಿಲ್ ನಂತರ ವೇತನ ಪಾವತಿಸುದಿಲ್ಲ. ಈ ಬಾರಿ ಲಾಕ್‌ಡೌನ್‌ನಿಂದ ಇನ್ನಿತರ ಚಟುವಟಿಕೆ ನಡೆಸಲು ಆಸ್ಪದ ಇಲ್ಲದ ಕಾರಣ ಗುತ್ತಿಗೆ ನೌಕರರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುವಂತಾಗಿದೆ. ಕಾರಣ ಎಲ್ಲರಿಗೂ ಜೂನ್‌ನಿಂದ ವೇತನ ಪಾವತಿಸಬೇಕು. ಕಳೆದ ವರ್ಷ ಏಪ್ರಿಲ್‌ನಿಂದಾದ ವೇತನ ಹೆಚ್ಚಳದ ಅರಿಯರ್ಸ್‌ ನೀಡಬೇಕು. ಪಿಎಫ್ ಕಂತಿನ ಹಣವನ್ನು ನೌಕರರ ಖಾತೆಗೆ ಸಂದಾಯ ಮಾಡಬೇಕು. ನೌಕರರ ವಜಾ ಆದೇಶವನ್ನು ಹಿಂಪಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ನಿಯೋಗದಲ್ಲಿ ಸಂಘದ ಅಧ್ಯಕ್ಷ ಎನ್.ಎಸ್.ವೀರೇಶ, ಪದಾಧಿಕಾರಿಗಳಾದ ಅಣ್ಣಪ್ಪ, ಲಕ್ಷ್ಮೀ, ಅನುರಾಧಾ, ಮಂಜುಳಾ, ಮಹೆಬೂಬಿ, ರಾಜೇಶ್ವರಿ ಇದ್ದರು.