ಜಿಲ್ಲೆ

ಕಸಾಪ ಚುನಾವಣೆ ನಿಯಮ ಬದಲಾಗಲಿ

ಸಾಹಿತಿ ಪಲುಗುಲ ನಾಗರಾಜ ಒತ್ತಾಯ

ರಾಯಚೂರು: ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ವ್ಯವಸ್ಥೆ ಸಾಮಾನ್ಯರ ಕೈಗೆ ದೊರಕುತ್ತಿಲ್ಲ. ಅದು ಉಳ್ಳವರ ಪಾಲಿನ ಗದ್ದುಗೆ ಆಗುತ್ತಿದೆ. ಆದ್ದರಿಂದ ಈಗಿರುವ ನಿಯಮಗಳ ಬದಲಾವಣೆ ಮಾಡಬೇಕು ಎಂದು ಸಾಹಿತಿ ಪಲುಗುಲ ನಾಗರಾಜ ಒತ್ತಾಯಿಸಿದ್ದಾರೆ.

ಕನ್ನಡದ ಸಾಕ್ಷಿ ಪ್ರಜ್ಞೆಯಂತಿರುವ ಕಸಾಪಕ್ಕೆ ರಾಜ್ಯದಲ್ಲಿ 7 ಲಕ್ಷ ಸದಸ್ಯತ್ವ ಇದೆ. ಜಿಲ್ಲೆಯ ಸದಸ್ಯರ ಸಂಖ್ಯೆ 6 ಸಾವಿರ ಮೀರಿದೆ. ಆದರೆ, ರಾಜ್ಯ ಮತ್ತು ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಮಾತ್ರ ಚುನಾವಣೆ ನಿಗದಿ ಅವೈಜ್ಞಾನಿಕವಾಗಿದೆ. ಹಾಗಾಗಿ, ಅನೇಕ ಸಾಹಿತಿಗಳಿಗೆ ಚುನಾವಣೆ ಆರ್ಥಿಕ ಹೊರೆ ಆಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಒಬ್ಬ ಸದಸ್ಯನಿಗೆ ಒಂದು ಅಂಚೆ ಕಾರ್ಡ್ ಕಳುಹಿಸಬೇಕಾದರೂ ಸಾವಿರಾರು ರೂಪಾಯಿ ಖರ್ಚಾಗುತ್ತಿದೆ. ಹೀಗಿರುವಾಗ ಒಬ್ಬ ಸಾಮಾನ್ಯ ಸಾಹಿತಿ ಕಣಕ್ಕಿಳಿಯಲು ಆಗುತ್ತಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಗೆದ್ದ ವ್ಯಕ್ತಿಯೇ ಇಡಿ ಜಿಲ್ಲೆಯ ತಾಲೂಕು ಅಧ್ಯಕ್ಷರ ನೇಮಕದ ಅಧಿಕಾರ ಹೊಂದುವುದು ಸರ್ವಾಧಿಕಾರಿ ವ್ಯವಸ್ಥೆಗೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ಆಯಾ ತಾಲೂಕು ಮತದಾರರು ತಾಲೂಕು ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ನೀಡಬೇಕು. ನಂತರ ಎಲ್ಲ ತಾಲೂಕು ಅಧ್ಯಕ್ಷರು ಸೇರಿ ಜಿಲ್ಲಾಧ್ಯಕ್ಷನನ್ನು ಆಯ್ಕೆ ಮಾಡಿಕೊಳ್ಳುವಂತಾಗಬೇಕು ಎಂದು ಒತ್ತಾಯಿಸಿದ್ದಾರೆ.