ಏಕೀಕರಣ ಚಳವಳಿಗೆ ರಾಯಚೂರಿನ ಕೊಡುಗೆ ಸ್ಮರಣೀಯ| ಕರೊನಾ ಸೇನಾನಿಗಳು, ಸಾಧಕರಿಗೆ ಗೌರವ
ರಾಯಚೂರು: ನಮ್ಮ ಭಾಷೆ ಸಮೃದ್ಧವಾಗಿದ್ದರೂ ಇಂಗ್ಲಿಷ್ ಸೇರಿ ಅನ್ಯ ಭಾಷೆಗಳ ಅತಿಯಾದ ದಾಳಿ ಕನ್ನಡ ಮೇಲಾಗುತ್ತಿದೆ. ಈ ನಿಟ್ಟಿನಲ್ಲಿ ಕನ್ನಡ ಕಲಿಕೆ ಬಗ್ಗೆ ಯುವಜನಾಂಗದಲ್ಲಿ ಪ್ರೀತಿ, ಕಾಳಜಿ ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ ಮೆನನ್ ಹೇಳಿದರು.
ಸ್ಥಳೀಯ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ರಾಜ್ಯೋತ್ಸವ ನಿಮಿತ್ತ ಸೋಮವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕನ್ನಡ ಸಾಹಿತ್ಯದ ಕೊಡುಗೆ ಅಪಾರ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ಹೆಮ್ಮೆಯ ವಿಷಯ. ನಾಡಿನ ಇತಿಹಾಸ, ಪರಂಪರೆ, ಸಾಂಸ್ಕೃತಿಕ ಹಿರಿಮೆ ತುಂಬಾ ವೈಶಿಷ್ಟೃವಾಗಿದೆ. ವೈವಿಧ್ಯಮಯ ಸಂಸ್ಕೃತಿ, ಜೀವನ ಪದ್ಧತಿ, ಭಾವೈಕ್ಯತೆಯ ಸ್ವರ್ಗವಾಗಿರುವ ಕರ್ನಾಟಕವು ಸಮನ್ವಯತೆ ಮತ್ತು ಸೌಹಾರ್ದದ ನೆಲವೀಡಾಗಿದೆ. ಏಕೀಕರಣ ಚಳವಳಿಗೆ ರಾಯಚೂರಿನ ಕೊಡುಗೆ ಸ್ಮರಣೀಯವಾಗಿದೆ ಎಂದು ಸ್ಮರಿಸಿದರು.
ಈ ವರ್ಷ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ಸರ್ಕಾರವು ‘ಮಾತಾಡ್ ಮಾತಾಡ್ ಕನ್ನಡ ಅಭಿಯಾನ’ಕ್ಕೆ ಚಾಲನೆ ನೀಡುವ ಮೂಲಕ ಲಕ್ಷಾಂತರ ಕಂಠಗಳಿಂದ ಏಕಕಾಲಕ್ಕೆ ಕನ್ನಡ ಗೀತೆಗಳ ಗಾಯನ ನಡೆಸಲಾಯಿತು. ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಯಿತು ಎಂದರು.
ಈ ಸಂದರ್ಭ ಪೊಲೀಸ್, ಗೃಹ ರಕ್ಷಕದಳ ಸೇರಿದಂತೆ ವಿವಿಧ ತಂಡಗಳಿಂದ ಪಥ ಸಂಚಲನ ನಡೆಸಲಾಯಿತು. ಕರೊನಾ ಸಂದರ್ಭ ಉತ್ತಮವಾಗಿ ಕಾರ್ಯನಿರ್ವಹಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ಇದಕ್ಕೂ ಮುಂಚೆ ಕರ್ನಾಟಕ ಸಂಘದಲ್ಲಿ ಭುವನೇಶ್ವರಿ ಮೂರ್ತಿಗೆ ಮಾಲಾರ್ಪಣೆ ಮಾಡಿ ವಿಶೇಷ ಪೂಜೆಸಲ್ಲಿಸಲಾಯಿತು. ಶಾಸಕರಾದ ಡಾ.ಶಿವರಾಜ ಪಾಟೀಲ್, ಬಸನಗೌಡ ದದ್ದಲ್, ನಗರಸಭೆ ಅಧ್ಯಕ್ಷ ಇ.ವಿನಯಕುಮಾರ, ಆರ್‌ಡಿಎ ಅಧ್ಯಕ್ಷ ವೈ.ಗೋಪಾಲರೆಡ್ಡಿ, ನಗರಸಭೆ ಸದಸ್ಯ ಈ.ಶಶಿರಾಜ ಉಪಸ್ಥಿತರಿದ್ದರು.
ಪೊಲೀಸ್ ಪರೇಡ್ ಮೈದಾನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಎಸ್ಪಿ ಬಿ.ನಿಕಿಲ್, ಅಪರ ಜಿಲ್ಲಾಧಿಕಾರಿ ಕೆ.ಆರ್.ದುರಗೇಶ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಉಪಸ್ಥಿತರಿದ್ದರು. ಜನಪ್ರತಿನಿಧಿಗಳ ಗೈರು ಹಾಜರಿ ಎದ್ದು ಕಂಡುಬರುತ್ತಿತ್ತು.
ಹಿಂದುಳಿದ ಪ್ರದೇಶ ಎನ್ನುವ ಹಣೆಪಟ್ಟಿ ತೊಲಗಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಹೊಸಪೇಟೆಯಲ್ಲಿ ಸಹಾಯಕ ಆಯುಕ್ತನಾಗಿ, ಯಾದಗಿರಿಯಲ್ಲಿ ಜಿಪಂ ಸಿಇಒ ಆಗಿ ಕಾರ್ಯನಿರ್ವಹಿಸಿರುವುದರಿಂದ ಈ ಭಾಗದ ಬಗ್ಗೆ ಅಲ್ಪಮಟ್ಟಿಗೆ ಮಾಹಿತಿಯಿದೆ. ನಂತರ ಬೆಂಗಳೂರಿನಲ್ಲಿ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದು, ಪ್ರಥಮ ಬಾರಿಗೆ ಜಿಲ್ಲೆಗೆ ಬಂದಿದ್ದು, ಅರಿತುಕೊಳ್ಳಲು ಕಾಲಾವಕಾಶ ಬೇಕಾಗಿದೆ. ಅಕ್ರಮ ಮರಳು ಸಾಗಣೆ, ಕುಡಿಯುವ ನೀರಿನ ಸಮಸ್ಯೆ, ಎನ್‌ಆರ್‌ಬಿಸಿ ಕೊನೆಯಭಾಗದ ರೈತರ ನೀರಿನ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಆಡಳಿತವನ್ನು ಚುರುಕುಗೊಳಿಸಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗುವುದು.| ಡಾ.ಅವಿನಾಶ ಮೆನನ್, ಜಿಲ್ಲಾಧಿಕಾರಿ