ಜಿಲ್ಲೆ

ಬೆಂಗಳೂರಿನಲ್ಲಿ ಮಂಥನಾ ಸಮಾವೇಶ ಡಿ.16ಕ್ಕೆ

ರಾಯಚೂರು: ಬಲಾಢ್ಯ ಹಾಗೂ ಪ್ರತಿಗಾಮಿ ಸಮುದಾಯಗಳ ಶಕ್ತಿಗಳು ಪಿತೂರಿ ಹಾಗೂ ರಾಜಕಾರಣದಿಂದ ಕೆಳಸಮುದಾಯಗಳ ಘನತೆಯ ಬದುಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ಜಿಲ್ಲಾ ಸಂಚಾಲಕ ಮಾರೆಪ್ಪ ಹರವಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಜಾತಿಗಳ ಮಧ್ಯೆ ವೈಷ್ಯಮ ಬೆಳೆಸುವುದು. ಅಪಪ್ರಚಾರ ನಡೆಯುತ್ತಿರುವ ಕುರಿತು ಕರ್ನಾಟಕ ಜನಶಕ್ತಿ ಸಂಘಟನೆಯಿಂದ ಡಿ.16ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಶೋಷಿತ ಸಮುದಾಯಗಳ ಮಂಥನಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.

ಸ್ವಾತಂತ್ರೃ, ಸಮಾನತೆ, ಸೋದರತೆ ಹಾಗೂ ಸಾಮಾಜಿಕ ನ್ಯಾಯದ ವಿರುದ್ಧದ ಬೆಳವಣಿಗೆಗಳು ಸಮಾಜದಲ್ಲಿ ತೀವ್ರಗೊಳುತ್ತಿವೆ. ಸಂವಿಧಾನ ಆಶಯಗಳಿಗೆ ವಿರುದ್ಧವಾಗಿ ಬಲಾಢ್ಯ ಸಮುದಾಯಗಳು ಕೆಳಸಮುದಾಯಗಳ ಪಾಲನ್ನು ಕಸಿದುಕೊಳ್ಳುವ ಪ್ರಯತ್ನದಲ್ಲಿವೆ. ಈ ಬಗ್ಗೆ ಸಮಾವೇಶದಲ್ಲಿ ಚರ್ಚೆಗಳು ನಡೆಯತ್ತವೆ. ಸಮಾವೇಶದ ಉದ್ಘಾಟನೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ದಲಿತ ಚಳವಳಿಯ ಹಿರಿಯ ನಾಯಕ ಎನ್.ವೆಂಕಟೇಶ, ಆದನೂರು ಶ್ರೀಧರ ಸೇರಿದಂತೆ ಅನೇಕರು ಇರಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಎಂ.ಆರ್.ಭೇರಿ, ಖಾಜಾ ಅಸ್ಲಂ, ಆಂಜನೇಯ್ಯ ಕುರುಬದೊಡ್ಡಿ, ಹನುಮಂತ ಗುಂಜಳ್ಳಿ, ರಂಗಾರೆಡ್ಡಿ, ಗೋವಿಂದ, ನರಸಿಂಹಲು, ಶಿವರಾಜ ಪೂರತಿಪ್ಲಿ ಸೇರಿದಂತೆ ಇತರರಿದ್ದರು.