ಜನಶಕ್ತಿ ಹಾಗೂ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಆಯೋಜಿಸಿದ್ದ ಹಳ್ಳಿಯಾನ ಜಾಗೃತಿ ಜಾಥಾಗೆ ರಾಯಚೂರಿನ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಚಾಲನೆ ನೀಡಲಾಯಿತು.  
ಜಿಲ್ಲೆ

ಕೃಷಿ ಕಾಯ್ದೆ ವಿರೋಧಿಸಿ ಹಳ್ಳಿಯಾನ ಜಾಗೃತಿ ಜಾಥಾ

ರಾಯಚೂರು: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ಆರಂಭವಾಗಿ ನ.26ಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಜನಶಕ್ತಿ ಹಾಗೂ ಕರ್ನಾಟಕ ವಿದ್ಯಾರ್ಥಿ ಸಂಘಟನೆಯಿಂದ ಬುಧವಾರದಿಂದ ಹಳ್ಳಿಯಾನ ಜಾಗೃತಿ ಜಾಥಾ ಆರಂಭಿಸಲಾಯಿತು.

ಸ್ಥಳೀಯ ಅಂಬೇಡ್ಕರ್ ವೃತ್ತದಲ್ಲಿ ಹಳ್ಳಿಯಾನಕ್ಕೆ ಚಾಲನೆ ನೀಡಲಾಗಿದ್ದು, ಜಾಥಾ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಸಂಚರಿಸಿ ರೈತ ವಿರೋಧಿ ಕೃಷಿ ಕಾಯ್ದೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಲಾಗುತ್ತಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ, ಎಪಿಎಂಸಿ ಹಾಗೂ ವಿದ್ಯುತ್ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಕಳೆದ ಒಂದು ವರ್ಷಗಳಿಂದ ರೈತರು ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದನೆ ನೀಡದೆ ಹೋರಾಟ ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದೆ.

ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮುಕ್ತ ಚರ್ಚೆಗೆ ಅವಕಾಶ ನೀಡದೆ ತರಾತುರಿಯಲ್ಲಿ ಕಾಯ್ದೆಗಳನ್ನು ಅನುಮೋದಿಸಲಾಗಿದೆ. ರೈತರ ವಿರೋಧವನ್ನು ಲೆಕ್ಕಿಸದೆ ರಾಜ್ಯ ಸರ್ಕಾರಗಳು ಜನವಿರೋಧಿ ನಿರ್ಧಾರವನ್ನು ಬೆಂಬಲಿಸುತ್ತಿವೆ ಎಂದು ಸಂಘಟಕರು ದೂರಿದರು.

ಈ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಹಳ್ಳಿಯಾನ ತಾಲೂಕಿನ ಕಲ್ಮಲಾ, ಹೊಸಪೇಟೆ, ಜೇಗರಕಲ್, ಅರಷಿಣಗಿ, ಶಕ್ತಿನಗರ, ದಿನ್ನಿ, ಹಿರೇಕಲ್ಲು, ರಂಗಾಪುರ, ಚಂದ್ರಬಂಡಾ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ತಿಳಿಸಿದರು.

ಪ್ರಗತಿಪರ ಸಂಘಟನೆಗಳ ಮುಖಂಡರಾದ ಮಾರೆಪ್ಪ ಹರವಿ, ಆಂಜಿನೇಯ, ಎಂ.ಆರ್.ಭೇರಿ, ಜಾನ್‌ವೆಸ್ಲಿ, ಖಾಜಾ ಅಸ್ಲಂ ಅಹ್ಮದ್ ಹಾಗೂ ಇತರರಿದ್ದರು.