ರಾಯಚೂರಿನ ನೇತಾಜಿ ವೃತ್ತದಲ್ಲಿ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಬೈಕ್ ಮೆರವಣಿಗೆಯಲ್ಲಿ ತೊಡಗಿರುವ ಮಾಜಿ ಸೈನಿಕರು ಮತ್ತು ಎನ್ಸಿಸಿ ಸ್ವಯಂ ಸೇವಕರು. 
ಜಿಲ್ಲೆ

ಕಾರ್ಗಿಲ್ ವಿಜಯೋತ್ಸವದ ಸಂಭ್ರಮ: ಎಲ್ಲೆಡೆ ಭಾರತಾಂಬೆಗೆ ಜೈಕಾರ

Gangavati - Shashidhara Shashidhara

ರಾಯಚೂರು:  25ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಜಿಲ್ಲೆಯಲ್ಲಿ ಮಾಜಿ ಸೈನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ವಿಜಯ್ ದಿವಸ್‌ನ್ನು ಸಂಭ್ರಮದಿಂದ ಆಚರಿಸಲಾಯಿತು.

ನಗರದ ಎಲ್‌ವಿಡಿ ಕಾಲೇಜಿನಿಂದ  ಮಾಜಿ ಸೈನಿಕರು  ಹಾಗೂ ವಿವಿಧ ಕಾಲೇಜುಗಳ ಎನ್‌ಸಿಸಿ ಸ್ವಯಂ ಸೇವಕರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್‍ ಜಾಥ ಮಾಡಲಾಯಿತು.

ನಂತರ ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿರುವ ಮಹಾತ್ಮಾಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಭಾರತ ಮಾತೆಯ ಪರ ಘೋಷಣೆಗಳನ್ನು ಕೂಗಲಾಯಿತು.

ಇದೇ ವೇಳೆ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಚೆನ್ನಾರೆಡ್ಡಿ ಮಾತನಾಡಿ, ಕಾರ್ಗಿಲ್ ವಿಜಯದ ಉತ್ಸವಕ್ಕೆ ಇಂದಿಗೆ 25 ವರ್ಷಗಳಾಗಿದ್ದು, ಪಾಕಿಸ್ಥಾನದ ವಿರುದ್ಧ ಹೋರಾಡಿ ಭಾರತ ದೇಶದ ನೆಲವನ್ನು ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿರುವ ಎಲ್ಲ ಸೈನಿಕರ ಶೌರ್ಯ ಸಾಹಸ ಅಮರ ಎಂದರು.

ಈ ಸಂದರ್ಭದಲ್ಲಿ ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಮನೋಹರ್‌ಸಿಂಗ್, ಕೆ.ಎಸ್ ರಾವ್, ಕಿಶನ್ ಪ್ರಸಾದ್, ರಾಜಪ್ಪ, ರವೀಂದ್ರ ಸಿಂಗ್, ಶೇಖಪ್ಪ, ನಾಶೀರ್ ಖಾನ್ ಸೇರಿದಂತೆ ಇನ್ನಿತರರಿದ್ದರು.