ಜಿಲ್ಲೆ

ಕನ್ನಡ ಭಾಷೆ ಗಟ್ಟಿಯಾಗಬೇಕು: ಸಿಎಂ ಸಿದ್ದರಾಮಯ್ಯ ಕರೆ

Gangavati - Shashidhara Shashidhara

ರಾಯಚೂರು: ಕನ್ನಡ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕರ್ನಾಟಕ ಸಂಭ್ರಮ ವನ್ನು ರಾಜ್ಯ ಸರ್ಕಾರ ಆಚರಿಸುತ್ತಿದೆ. ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಘೊಷವಾಕ್ಯದಡಿ ಸಶಕ್ತ ಹಾಗೂ ಸಮೃದ್ಧ ಕರ್ನಾಟಕದ ನಿರ್ಮಾಣ ಹಾಗೂ ಕನ್ನಡ ಭಾಷಾ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ಸಂಭ್ರಮ-50 ಅಂಗವಾಗಿ ಗೋಕಾಕ್ ಚಳವಳಿಯ ಹಿನ್ನೋಟ ಮತ್ತು ಮುನ್ನೋಟ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಬಳಸುವ ಮೂಲಕ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಅಗ್ರ ಸ್ಥಾನಕ್ಕೆ ಕೊಂಡ್ಯೊಯಲು ಮುಂದಾಗಬೇಕಾಗಿದೆ. ಕನ್ನಡ ಭಾಷೆ ಗಟ್ಟಿಯಾಗಿ ಬೆಳೆಯಬೇಕು, ಇತರೆ ಭಾಷೆಗಳನ್ನು ಗೌರವಿಸಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು ಎಂದರು.

ಕರ್ನಾಟಕದ ಜನರು ಮಾತೃಭಾಷೆಗೆ ಧಕ್ಕೆಯಾಗುವಷ್ಟು ಉದಾರಿಗಳಾಗಬಾರದು. ಕರ್ನಾಟಕದಲ್ಲಿ ಕನ್ನಡ ಭಾಷೆ ಆಡಳಿತ ಭಾಷೆಯಾಗಬೇಕು. ಕನ್ನಡ ಭಾಷೆಯ ರಕ್ಷಣೆಗಾಗಿ 1983ರ ಮೇ ತಿಂಗಳಿನಲ್ಲಿ ಕನ್ನಡ ಕಾವಲು ಸಮಿತಿ ರಚನೆಯಾಯಿತು. ಗೋಕಾಕ್ ಚಳವಳಿಯ ಬಿಸಿ ಕರ್ನಾಟಕ ಸರ್ಕಾರದ ಮೇಲಿತ್ತು. ಕನ್ನಡಕ್ಕೆ ಪ್ರಾಧ್ಯಾನ್ಯತೆ ಕೊಡಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಕಾವಲು ಸಮಿತಿಯನ್ನು ರಚಿಸಿತು.

ಯಾವುದೇ ರಾಜ್ಯದಲ್ಲಿ ಮಾತೃ ಭಾಷೆಯನ್ನು ಕಾಯಲಿಕ್ಕೆ ಕಾವಲು ಸಮಿತಿಯಿಲ್ಲ. ಕನ್ನಡವನ್ನು ಕಾಯಲು, ಕನ್ನಡ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಲಿಕ್ಕೆ ಮೊದಲ ಭಾರಿಗೆ ಕರ್ನಾಟಕದಲ್ಲಿ ಸಮಿತಿ ರಚನೆಯಾಯಿತು. ಇದೀಗ ಅದೇ ಕಾವಲು ಸಮಿತಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಗಿದ್ದು, ಕನ್ನಡ ಭಾಷೆಯ ಉಳಿವಿಗೆ ಹಾಗೂ ಕನ್ನಡ ಭಾಷೆಯ ಬೆಳವಣಿಗೆಗೆ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಇಂಗ್ಲಿಷ್ ಸೇರಿದಂತೆ ಇನ್ನಿತರ ಭಾಷೆಯನ್ನು ಕಲಿಯಬೇಕು ಆದರೆ ನಮ್ಮ ಮಾತೃ ಭಾಷೆ, ನಾಡಿನ ಭಾಷೆಗೆ ಅಗ್ರ ಸ್ಥಾನವಿರಬೇಕು. ಮನೆಗಳಲ್ಲಿ, ವ್ಯವಹಾರದಲ್ಲಿ ಕನ್ನಡ ಭಾಷೆಯನ್ನು ಬಳಸಿದಾಗ ಮಾತ್ರ ರಾಜ್ಯದಲ್ಲಿ ಕನ್ನಡ ಭಾಷೆ ಅಗ್ರ ಸ್ಥಾನಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂದರು.

ಡಾ.ರಾಜಕುಮಾರ ಗೋಕಾಕ್ ಚಳವಳಿಯ ಹೋರಾಟಕ್ಕೆ ಇಳಿದ ನಂತರ ಚಳವಳಿಗೆ ವೇಗ ಸಿಕ್ಕಿದ್ದು, ಗೋಕಾಕ್ ಚಳವಳಿಯು ಭಾಷಾ ಚಳವಳಿ ಅಥವಾ ಕನ್ನಡ ಚಳವಳಿಯಾಗಿದ್ದು ಐತಿಹಾಸಿಕವಾಗಿತ್ತು. ಕನ್ನಡದಲ್ಲಿ ತಂತ್ರಜ್ಞಾನ ಬೆಳೆದಿದೆ. ಅನ್ಯ ಭಾಷೆಗಳ ಬಗ್ಗೆ ದುರಾಭಿಮಾನ ಬೆಳೆಸಿಕೊಳ್ಳುವ ಅಗತ್ಯವಿಲ್ಲ ಆದರೆ ಕನ್ನಡ ಭಾಷೆಯ ಮೇಲೆ ಅಭಿಮಾನ ಬೆಳೆಸಿಕೊಳ್ಳುವ ಕೆಲಸವಾಗಬೇಕು. ರಾಜ್ಯದಲ್ಲಿ ಕನ್ನಡ ವಾತಾವರಣವನ್ನು ನಿರ್ಮಾಣ ಮಾಡಬೇಕಾಗಿರುವುದು ಅವಶ್ಯಕವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹಾದೇವಪ್ಪ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೊಸರಾಜು, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ, ಎಂಎಲ್ಸಿಗಳಾದ ಎ.ವಸಂತಕುಮಾರ್, ಶರಣೇಗೌಡ ಬಯ್ಯಪೂರ್, ಬಸನಗೌಡ ಬಾದರ್ಲಿ, ಚಂದ್ರಶೇಖರ್ ಪಾಟೀಲ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಪ್ರಮುಖರಾದ ಚಂದ್ರಕಾಂತ್ ಬಲ್ಲಿದ್, ಹನುಮಂತಪ್ಪ, ಬಸವರಾಜ್ ಪಾಟೀಲ್ ಇಟಗಿ, ಡಿಸಿ ಕೆ.ನಿತೀಶ್, ಸಿಇಒ ರಾಹುಲ್ ತುಕಾರಾಂ ಪಾಂಡ್ವೆ, ಕೃಷಿ ವಿವಿ ಕುಲಪತಿ ಡಾ,ಎಂ ಹನುಮಂತಪ್ಪ ಸೇರಿದಂತೆ ಇತರರಿದ್ದರು.