ರಾಯಚೂರಿನ ಡಿಸಿ ಕಚೇರಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ಜರುಗಿತು.ಜಿಲ್ಲಾಧಿಕಾರಿ ಕೆ.ನಿತೀಶ್, ಪ್ರಾಧಿಕಾರದ ನಿರ್ದೇಶಕ ಸಂತೋಷ ಹಾನಗಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ್ ಇದ್ದರು. 
ಜಿಲ್ಲೆ

ಕನ್ನಡ ಅನುಷ್ಠಾನಗೊಳಿಸದಿದ್ದಲ್ಲಿ ಕಠಿಣ ಕ್ರಮಕ್ಕೆ ಶಿಫಾರಸ್ಸು: ಡಾ.ಪುರುಷೋತ್ತಮ ಎಚ್ಚರಿಕೆ

Gangavati - Shashidhara Shashidhara

ರಾಯಚೂರು: ಕನ್ನಡ ಭಾಷೆ ಬೆಳೆಯಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡಪರ ಸಂಘಟನೆಗಳಿಗಿಂತ ಅಧಿಕಾರಿಗಳ ಇಚ್ಛಾಶಕ್ತಿ ಬಹುಮುಖ್ಯವಾಗಿರುತ್ತದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.

ನಗರದ ಡಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಕನ್ನಡ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಗಳಿದ್ದು, ಕಾಲ ಕಾಲಕ್ಕೆ ಸಮಸ್ಯೆಗಳ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದಲ್ಲಿ ಬಗೆಹರಿಸಬಹುದಾಗಿದೆ. ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‌ಗಳಲ್ಲಿ ಎಲ್ಲ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಕೆಗೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರವಹಿಸಬೇಕು ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಪ್ರಸ್ತುತ ದಿನಗಳಲ್ಲಿ ಕನ್ನಡ ಭಾಷೆ ಕುಸಿಯುತ್ತಿದೆ. ಅಖಿಲ ಭಾರತ ಮಟ್ಟದಲ್ಲಿ ಶೇ.66ರ ವೇಗದಲ್ಲಿ ಹಿಂದಿ ಭಾಷೆ ಬೇಳೆಯುತ್ತಿದೆ. ಆದರೆ ಕನ್ನಡ ಭಾಷೆ ಕೇವಲ 3ರಷ್ಟು ವೇಗವನ್ನು ಹೊಂದಿದೆ. ಕನ್ನಡ ಭಾಷೆಯ ಬೆಳವಣಿಗೆಗೆ ಸರ್ಕಾರದ ಆದೇಶಗಳಿವೆ, ನಿಯಮಗಳಿವೆ ಹಾಗೂ ಕನ್ನಡಪರ ಸಂಘಟನೆಗಳ ಹೋರಾಟಗಳಿದ್ದರೂ ಕನ್ನಡ ಬೆಳೆಯುತ್ತಿಲ್ಲ ಎಂದರು.

ಮುಖ್ಯವಾಗಿ ಅಧಿಕಾರಿಗಳಿಗೆ ಕನ್ನಡದ ಭಾಷೆಯ ಮೇಲೆ ಪ್ರೀತಿ ಇರಬೇಕು. ಸಶಕ್ತವಾಗಿ ಬೆಳೆದು ಅತ್ಯಂತ ಶ್ರೀಮಂತ ಭಾಷೆ ಎನಿಸಿಕೊಂಡ ಕನ್ನಡ ಭಾಷೆಯ ಪರಿಸ್ಥತಿ ತೀರಾ ಹದಗೆಟ್ಟಿದೆ. ತ್ರಿಭಾಷಾ ಸೂತ್ರ ಅಂಗೀಕರಿಸಿಕೊಳ್ಳಲಾಗಿದೆ ಆದರೆ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಭಾಷೆಯನ್ನು ಬಳಸಬೇಕು. ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ಕನ್ನಡದ ಮೇಲೆ ಕಳಕಳಿಇರಬೇಕು. ಮಾತನಾಡುವಲ್ಲಿ ಯಾವ ಭಾಷೆ ಬಳಸಿದರೂ ಆಡಳಿತದ ವಿಷಯದಲ್ಲಿ ಕನ್ನಡ ಭಾಷೆಯನ್ನು ಬಳಸಬೇಕು ಎಂದರು.

ಗಡಿ ಭಾಗದಲ್ಲಿ ಕನ್ನಡ ಅನುಷ್ಠಾನ ಮಾಡುವುದು ಅತ್ಯಂತ ಅವಶ್ಯಕ ಆದರೆ ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನ ಅಷ್ಟೊಂದು ಪರಿಣಾಮಕಾರಿಯಾಗಿ ಆಗಿಲ್ಲ. ಶಕ್ತಿನಗರದ ಶಾಲೆಯೊಂದರಲ್ಲಿ ಕನ್ನಡ ತರಗತಿಗಳನ್ನು ಹಂತ ಹಂತವಾಗಿ ಮುಚ್ಚಲಾಗಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ನಿತೀಶ್, ಪ್ರಾಧಿಕಾರದ ನಿರ್ದೇಶಕ ಸಂತೋಷ ಹಾನಗಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ್, ಪ್ರಮುಖರಾದ ಜೆಸ್ಕಾಂ ಎಸ್‌ಇಇ ಚಂದ್ರಶೆಖರ ದೇಸಾಯಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ, ನಗರಾಭಿವೃದ್ಧಿ ಕೋಶದ ಪಿಡಿ ಜಗದೀಶ ಗಂಗಣ್ಣವರ್, ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೆಮಠ ಸೇರಿದಂತೆ ಇತರರಿದ್ದರು.