oplus_2 
ಜಿಲ್ಲೆ

ಬಿಸಿಲಿನ ಜತೆಗೆ ಸಾಹಿತ್ಯದ ಜಳ ಹೆಚ್ಚು: ಸಾಹಿತಿ ಮಹಾಂತೇಶ ಮಸ್ಕಿ ಅಭಿಪ್ರಾಯ

ರಾಯಚೂರು: ಗಜ್‌ಗಳು ಕೇವಲ ಪ್ರೀತಿ ಪ್ರೇಮದ ಸಾಹಿತ್ಯವಾಗಿತ್ತು. ಆದರೆ ಸಮಾಜದಲ್ಲಿರುವ ಅಸಮಾನತೆ ಮತ್ತು ಉತ್ತಮ ಆಡಳಿತದ ಕೊರತೆಯಿಂದ ಕವಿಗಳು ನೋವುಗಳನ್ನು ಪ್ರಸ್ತುತ ಪಡಿಸುವ ಸಹಿತ್ಯವಾಗಿ ಬದಲಾಗಿದೆ ಎಂದು ಹಿರಿಯ ಸಾಹಿತಿ ಮಹಾಂತೇಶ ಮಸ್ಕಿ ಹೇಳಿದರು.

ನಗರದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಿಂದು ಪ್ರಕಾಶನ ವತಿಯಿಂದ ಹಮ್ಮಿಕೊಂಡಿದ್ದ ಯುವ ಸಾಹಿತಿ ವೇಣು ಜಾಲಬೆಂಚಿ ರಚಿತ ‘ಮಾತಿಗೆ ಸಿಗದ ನವಿಲು’ ಕೃತಿ ಲೋಕಾರ್ಪಣೆಗೊಳಿಸಿ ಭಾನುವಾರ ಮಾತನಾಡಿದರು.

ರಾಯಚೂರು ಜಿಲ್ಲೆ ಬಂಡಾಯ ಸಾಹಿತ್ಯವನ್ನು ಹುಟ್ಟು ಹಾಕಿದೆ. ಗಜಲ್ ಸಾಹಿತ್ಯಕ್ಕೆ ವಿಶೇಷವಾದ ಸ್ವರೂಪವನ್ನು ಕೊಟ್ಟ ಹಿರಿಮೆ ಜಿಲ್ಲೆಗಿದ್ದು, ಬಿಸಿಲಿನ ಜಳದ ಜತೆಗೆ ಸಾಹಿತ್ಯದ ಜಳವು ಜಿಲ್ಲೆಯ ಸಾಹಿತಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ ಎಂದರು.

ಗಜಲ್ ಸಾಹಿತ್ಯವು ಮುಖ್ಯವಾಗಿ ಮಧು ಶಾಲೆಯಲ್ಲಿ ಹುಟ್ಟಿಕೊಳ್ಳುವ ಸಾಹಿತ್ಯ, ಸೀಮಿತವಾಗಿ ಮಧುವನ್ನು ಸೇವಿಸಿ, ಸಾಕಿಯನ್ನು ಉದ್ದೇಶಿಸಿ ಕಟ್ಟುವ ಪದಗಳೇ ಗಜಲ್. ಕೇವಲ ಪ್ರೀತಿ ಪ್ರೇಮ ಇದ್ದ ಸಾಹಿತ್ಯದಲ್ಲಿ ಪ್ರಸ್ತುತ ಜಿಲ್ಲೆಯ ಸಾಹಿತಿಗಳು ನೋವುಗಳನ್ನು ತೋರಿಸುತ್ತಿದ್ದಾರೆ ಎಂದು ತಿಳಿಸಿದರು.

ಬಹುತ್ವ ಭಾರತದಲ್ಲಿ ಕೇವಲ ಒಂದು ಸಮುದಾಯ ಬದುಕಲು ಸಾಧ್ಯವಿಲ್ಲ. ಸಮುದಾಯಕ್ಕೆ ಬರುವ ಸಂಕಷ್ಟಗಳು, ವ್ಯಕ್ತಿಯ ಅಂತರಂಗದ ವಿಚಾರೆಧಾರೆಗಳನ್ನು ಗಜಲ್ ಪುಸ್ತಕದಲ್ಲಿ ಪ್ರಸ್ತುತಪಡಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ತುರವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಡಾ.ಕೆ.ಖಾದರ್ ಬಾಷಾ, ಹಿರಿಯ ಸಾಹಿತಿಗಳಾದ ವೀರಹನುಮಾನ, ಆಂಜಿನೇಯ್ಯ ಜಾಲಿಬೆಂಚಿ, ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ, ಬಿಂದು ಪ್ರಕಾಶನದ ಪ್ರಕಾಶಕ ಬಸವರಾಜ ಬ್ಯಾಗವಾಟ, ಕೃತಿಕಾರ ವೇಣು ಜಾಲಿಬೆಂಚಿ ಸೇರಿದಂತೆ ಇತರರಿದ್ದರು.