ಕಲ್ಯಾಣ ಕರ್ನಾಟಕಕ್ಕೆ ತಾರತಮ್ಯ ಧೋರಣೆ
ರಾಯಚೂರು: ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ತಾರತಮ್ಯ ಧೋರಣೆ ಅನುಸರಿಸಲಾಗಿದೆ ಎಂದು ಮಾಜಿ ಸಂಸದ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ ದೂರಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಜಿಲ್ಲೆ ಎಂದು ಪರಿಗಣಿಸಿದ್ದರೂ ಜಿಲ್ಲೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಘೋಷಣೆಯಾಗಿದ್ದ ರಾಯಚೂರು ವಿವಿ ಕಾರ್ಯಾರಂಭಕ್ಕೆ 600 ಕೋಟಿ ರೂ.ಅಗತ್ಯವಿದ್ದು, ಪ್ರಸಕ್ತ ಬಜೆಟ್‌ನಲ್ಲಿ ಕನಿಷ್ಠ 150 ಕೋಟಿ ರೂ. ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ, ಬಿಡಿಗಾಸನ್ನು ನೀಡಿಲ್ಲ. ವರ್ತುಲ ರಸ್ತೆ ಘೋಷಣೆ ಮಾಡಿದ್ದರೂ ಅನುದಾನ ನೀಡಿಲ್ಲ ಎಂದು ಆರೋಪಿಸಿದರು.
ಕರೊನಾ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದ ಸರ್ಕಾರ ಕರೊನಾ ಎರಡನೇ ಅಲೆ ಹೆಸರಿನಲ್ಲಿ ಜನರ ಜೀವನದೊಂದಿಗೆ ಚೆಲ್ಲಾಟವಾಡಲು ಮುಂದಾಗಿದೆ. ಯಾವುದೇ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದೆ ಬಂಡವಾಳಶಾಹಿಗಳಿಗೆ ಅನುಕೂಲ ಕಲ್ಪಿಸಲು ಮುಂದಾಗಿದೆ ಎಂದರು.
ಮಾಜಿ ಎಂಎಲ್ಸಿ ಎನ್.ಎಸ್.ಬೋಸರಾಜು ಮಾತನಾಡಿ, ತುಂಗಭದ್ರಾ ಎಡದಂಡೆ ಕಾಲುವೆ ಕೊನೆಭಾಗಕ್ಕೆ ಸಮರ್ಪಕ ನೀರು ಹರಿಸದಿರುವುದರಿಂದ ಸಾವಿರಾರು ಎಕರೆಯಲ್ಲಿ ಬೆಳೆಯಲಾಗಿರುವ ಭತ್ತ, ಮೆಣಸಿನಕಾಯಿ ಬೆಳೆ ಹಾಳುವ ಭೀತಿ ಎದುರಾಗಿದೆ. ಕಾಲುವೆಗೆ ಮಾ.31ರವರೆಗೆ 3,300 ಕ್ಯೂಸೆಕ್ ನೀರು ಹರಿಸಲು ತೀರ್ಮಾನಿಸಲಾಗಿದ್ದು, ಸಮರ್ಪಕ ಗೇಜ್ ಕಾಪಾಡದಿರುವುದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಏ.15ರವರೆಗೆ ನೀರು ಹರಿಸಿದಾಗ ಮಾತ್ರ ಬೆಳೆಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂದರು.
ಪಕ್ಷದ ವಿವಿಧ ಮುಖಂಡರಾದ ಎ.ವಸಂತಕುಮಾರ, ಜಿ.ಬಸವರಾಜ ರೆಡ್ಡಿ, ಜಯಣ್ಣ, ಕೆ.ಶಾಂತಪ್ಪ, ರುದ್ರಪ್ಪ ಅಂಗಡಿ, ಅಮರೇಗೌಡ ಹಂಚಿನಾಳ, ಜಿ.ಶಿವಮೂರ್ತಿ, ತಾಯಣ್ಣ ನಾಯಕ, ಜಿ.ಸುರೇಶ, ಭೀಮನಗೌಡ ಇಟಗಿ, ಮಂಜುಳಾ ಇದ್ದರು.
ಭದ್ರಾ ಜಲಾಶಯದಿಂದ ತುಂಗಭದ್ರಾ ಜಲಾಶಯಕ್ಕೆ 1.60 ಟಿಎಂಸಿ ನೀರು ಹರಿಸಲಾಗುತ್ತಿರುವುದು ರೈತರ ಕಣ್ಣೊರೆಸುವ ತಂತ್ರವಾಗಿದ್ದು, ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಿದರೆ ಅದರಲ್ಲಿ ತುಂಗಭದ್ರಾ ಜಲಾಶಯಕ್ಕೆ ಅರ್ಧದಷ್ಟು ಮಾತ್ರ ನೀರು ತಲುಪಲಿದೆ. | ಎನ್.ಎಸ್.ಬೋಸರಾಜು ವಿಧಾನ ಪರಿಷತ್ ಮಾಜಿ ಸದಸ್ಯ