ರಾಯಚೂರು: ಜೈನಮುನಿ ಕಾಮಕುಮಾರ ನಂದಿ ಹಾಗೂ ಟಿ.ನರಸಿಪುರದಲ್ಲಿ ಹಿಂದು ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಭಜರಂಗದಳ, ವಿಶ್ವ ಹಿಂದು ಪರಿಷತ್, ಹಿಂದು ಜನ ಜಾಗೃತಿ ಸಮಿತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಮಹ್ಮದ್ ಆಸೀಫ್‌ಗೆ ಮನವಿ ಸಲ್ಲಿಸಿ, ಎರಡು ಹತ್ಯೆಗಳಿಂದ ರಾಜ್ಯದಲ್ಲಿ ಭಯದ ವಾತಾವರಣ ಮೂಡುವಂತಾಗಿದ್ದು, ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಅಕ್ರಮ ಕಸಾಯಿಖಾನೆ ಅಡ್ಡೆ ಮೇಲೆ ದಾಳಿ ಮಾಡುತ್ತಿದ್ದ ಹಿಂದು ಕಾರ್ಯಕರ್ತ ವೇಣುಗೋಪಾಲನನ್ನು ಹನುಮ ಜಯಂತಿ ನಂತರ ಕೊಲೆ ಮಾಡಲಾಗಿದ್ದು, ಸಾಲ ವಾಪಸ್ ಕೇಳಿದ್ದಕ್ಕೆ ಜೈನಮುನಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾಜ್ಯದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ.
ಬೆಂಗಳೂರಿನ ನಾಗರಕಟ್ಟೆಯಲ್ಲಿ ಪೂಜೆ ಮಾಡದಂತೆ ಪೊಲೀಸರು ನೋಟಿಸ್ ನೀಡಿದ್ದನ್ನು ಹಿಂಪಡೆಯಬೇಕು. ವಕ್ಫ್ ಬೋರ್ಡ್ ಕಾಯ್ದೆ ಹಿಂಪಡೆಯಬೇಕು. ರಾಜ್ಯದ ವಿವಿಧ ಕಾನೂನು ದುರುಪಯೋಗ ಪಡಿಸಿಕೊಂಡು ವಕ್ಫ್ ಬೋರ್ಡ್ ಸರ್ಕಾರಿ, ಖಾಸಗಿ ಭೂಮಿ ಹಿಂಪಡೆಯುವುದನ್ನು ತಡೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಭಜರಂಗ ದಳ ಜಿಲ್ಲಾ ಸಂಚಾಲಕ ಶರಣಬಸವ, ಪದಾಧಿಕಾರಿಗಳಾದ ಮಹೇಶ, ಅಭಿಷೇಕ್, ರಘುನಾಥರೆಡ್ಡಿ, ವಿಶಾಲ್, ಸುಮೀತ್, ಶ್ರೀಕಾಂತ, ತಿಲಕರಾಜ್, ಈರಣ್ಣ, ಅಯ್ಯಪ್ಪ, ವಿಶ್ವ ಹಿಂದು ಪರಿಷತ್ ಪದಾಧಿಕಾರಿಗಳಾದ ಸುವರ್ಣ, ಕೃಷ್ಣವೇಣಿ, ಶಿವರಾಜ, ಜಯಶ್ರೀಮ, ಜ್ಞಾನೇಶಗೌಡ ಪಾಲ್ಗೊಂಡಿದ್ದರು.