ರಾಯಚೂರಿನ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆಯಲ್ಲಿ ವಿಜಯವಾಣಿ, ದಿಗ್ವಿಜಯ ನ್ಯೂಸ್ ಸಹಯೋಗದಲ್ಲಿ ಆಯೋಜಿಸಿದ್ದ ಯೋಗ ತರಬೇತಿ ಶಿಬಿರವನ್ನು ಭಾರತ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಜಿ.ಎಸ್.ಹಿರೇಮಠ ಮಂಗಳವಾರ ಉದ್ಘಾಟಿಸಿದರು. ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎನ್.ಎಚ್.ಬಾಷಾ, ಪ್ರಾಚಾರ್ಯೆ ರಾಜೇಶ್ವರಿ, ಭಾರತ ಸೇವಾದಳದ ವಿಭಾಗೀಯ ಸಂಘಟಕ ವಿದ್ಯಾಸಾಗರ ಚಿಣಮಗೇರಿ,ದೈಹಿಕ ಶಿಕ್ಷಣ ಶಿಕ್ಷಕಿ ವೀಣಾ ಇತರರಿದ್ದರು. 
ಜಿಲ್ಲೆ

ಒತ್ತಡಗಳಿಗೆ ಯೋಗದಲ್ಲಿದೆ ಪರಿಹಾರ


ಭಾರತ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಜಿ.ಎಸ್.ಹಿರೇಮಠ ಅನಿಸಿಕೆ

ರಾಯಚೂರು: ಬದಲಾಗಿರುವ ಜೀವನ ಶೈಲಿಯಿಂದಾಗಿ ಬರುತ್ತಿರುವ ರೋಗ-ರುಜಿನಗಳಿಂದ ಪಾರಾಗಲು ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸ ಮಾಡುವುದು ಅತ್ಯವಶ್ಯವಾಗಿದೆ ಎಂದು ಭಾರತ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಜಿ.ಎಸ್.ಹಿರೇಮಠ ಹೇಳಿದರು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ನಗರದ ಚಂದ್ರಬಂಡಾ ರಸ್ತೆಯಲ್ಲಿರುವ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆಯಲ್ಲಿ ವಿಜಯವಾಣಿ, ದಿಗ್ವಿಜಯ ನ್ಯೂಸ್, ಭಾರತ ಸೇವಾದಳ, ಜಿಲ್ಲಾ ಆಯುಷ್ ಇಲಾಖೆ, ನೆಹರು ಯುವಕೇಂದ್ರದಿಂದ ಆಯೋಜಿಸಿದ್ದ ಯೋಗ ತರಬೇತಿ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ನಾವು ಸೇವಿಸುವ ಆಹಾರ ರಾಸಾಯನಿಕಯುಕ್ತವಾಗಿರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತಿವೆ. ರಾಸಾಯನಿಕಯುಕ್ತ ಆಹಾರ ಸೇವನೆಯಿಂದ ದೇಶದಲ್ಲಿ 6 ಕೋಟಿಗೂ ಹೆಚ್ಚು ಜನರು ಕ್ಯಾನ್ಸರ್‌ಗೆ ತುತ್ತಾಗಿದ್ದು, ಅದಕ್ಕೂ ಹೆಚ್ಚಿನ ಜನರು ಇತರ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಮಾನಸಿಕ ಮತ್ತು ದೈಹಿಕ ಒತ್ತಡ ಹೆಚ್ಚಾಗುತ್ತಿದ್ದು, ಪೂರ್ವಜರಿಂದ ಬಂದ ಬಳುವಳಿಯಾಗಿರುವ ಯೋಗದಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಸಮತೋಲನ ಆಹಾರ ಸೇವನೆ ಹಾಗೂ ನಿತ್ಯ ಯೋಗಾಭ್ಯಾಸದಿಂದ ನಾವು ರೋಗ ಮುಕ್ತರಾಗಬಹುದಾಗಿದೆ ಎಂದು ಜಿ.ಎಸ್.ಹಿರೇಮಠ ಹೇಳಿದರು.

ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎನ್.ಎಚ್.ಬಾಷಾ ಮಾತನಾಡಿ, ಸುಖಿ ಕುಟುಂಬಕ್ಕಾಗಿ ಯೋಗ, ಪ್ರತಿ ಮನೆಯಂಗಳದಲ್ಲಿ ಯೋಗ ಘೋಷ ವಾಕ್ಯದೊಂದಿಗೆ ಈ ಬಾರಿಯ ಯೋಗ ದಿನ ಆಚರಿಸಲಾಗುತ್ತಿದೆ. ಯುವಜನತೆ ಫಾಸ್ಟ್‌ಫುಡ್ ಸಂಸ್ಕೃತಿಯಿಂದ ಹೊರಬಂದು ಉತ್ತಮ ಆಹಾರ ಸೇವನೆಗೆ ಒತ್ತು ನೀಡಬೇಕಾಗಿದೆ ಎಂದರು.

ಭಾರತ ಸೇವಾದಳದ ಪ್ರತಿನಿಧಿ ದಾನಮ್ಮ ಸುಭಾಶ್ಚಂದ್ರ ಮಾತನಾಡಿ, ಯೋಗದಿಂದ ಏಕಾಗ್ರತೆ ಬೆಳೆಯಲಿದ್ದು, ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಯೋಗಾಭ್ಯಾಸ ಮಾಡಬಹುದಾಗಿದೆ. ಮಕ್ಕಳು ಓದಿನಲ್ಲಿ ಏಕಾಗ್ರತೆ ಸಾಧಿಸಲು ಯೋಗ ಅಗತ್ಯವಾಗಿದೆ ಎಂದು ಹೇಳಿದರು.

ಶಾಲೆಯ ಪ್ರಾಚಾರ್ಯೆ ರಾಜೇಶ್ವರಿ ಮಾತನಾಡಿ, ಯೋಗಾಭ್ಯಾಸಕ್ಕೆ ವಿಶೇಷ ಕೌಶಲ ಬೇಕು ಎನ್ನುವ ತಪ್ಪು ಕಲ್ಪನೆ ಜನರಲ್ಲಿದೆ. ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಬೇಕಾದ ಸುಲಭ ಆಸನಗಳನ್ನು ಯಾವುದೇ ಕೌಶಲವಿಲ್ಲದೆ ಎಲ್ಲರೂ ಮಾಡಬಹುದಾಗಿದೆ ಎಂದು ತಿಳಿಸಿದರು.

ಶಾಲೆಯ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು. ಭಾರತ ಸೇವಾದಳದ ವಿಭಾಗೀಯ ಸಂಘಟಕ ವಿದ್ಯಾಸಾಗರ ಚಿಣಮಗೇರಿ, ದೈಹಿಕ ಶಿಕ್ಷಣ ಶಿಕ್ಷಕಿ ವೀಣಾ, ಸಿಬ್ಬಂದಿ ಇದ್ದರು.