ಮಾನವ ಹಕ್ಕುಗಳ ನಿಮಿತ್ತ ರಾಯಚೂರಿನಲ್ಲಿ ಮಾನವ ಹಕ್ಕುಗಳ ಸಂಘಟನೆ ಹಮ್ಮಿಕೊಂಡಿದ್ದ ಜನ ಜಾಗೃತಿ ಬೈಕ್ ರ‌್ಯಾಲಿಗೆ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್.ಭಾನುರಾಜ ಚಾಲನೆ ನೀಡಿದರು.  
ಜಿಲ್ಲೆ

ಇತರರ ಹಕ್ಕುಗಳಿಗೆ ಚ್ಯುತಿ ಬಾರದಿರಲಿ

ರಾಯಚೂರು: ಮಾನವ ಹಕ್ಕುಗಳ ದಿನಾಚರಣೆ ನಿಮಿತ್ತ ಜಿಲ್ಲಾ ಮಾನವ ಹಕ್ಕುಗಳ ಸಂಘಟನೆಯಿಂದ ಮಾನವ ಹಕ್ಕುಗಳ ಜಾಗೃತಿಗಾಗಿ ನಗರದ ಪ್ರಮುಖ ಬೀದಿಗಳಲ್ಲಿ ಶನಿವಾರ ಬೈಕ್ ರ‌್ಯಾಲಿ ನಡೆಸಲಾಯಿತು.

ನಗರದ ನಿಜಲಿಂಗಪ್ಪ ಕಾಲನಿಯಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್.ಭಾನುರಾಜ ರ‌್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರಿಗೂ ಬದುಕುವ ಹಕ್ಕುಂಟು. ಆದರೆ ಇತರರ ಹಕ್ಕುಗಳಿಗೆ ಚ್ಯುತಿ ಬರದಂತೆ ಬದುಕಬೇಕು. ನಾವು ಬದುಕುವುದರ ಜತೆಗೆ ಇತರರಿಗೆ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಜಿಲ್ಲಾ ಮಾನವ ಹಕ್ಕುಗಳ ಸಂಘಟನೆ ಅಧ್ಯಕ್ಷ ಚಂದ್ರಕಾಂತ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಬಗ್ಗೆ ಅರಿತುಕೊಂಡಿರಬೇಕು. ಪ್ರಸ್ತುತ ಮಾನವ ಹಕ್ಕುಗಳ ಉಲ್ಲಂಘಟನೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿವರ್ಷ ರ‌್ಯಾಲಿ ನಡೆಸುವ ಮೂಲಕ ಜನರಲ್ಲಿ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ನಗರದ ಪ್ರಮುಖ ಬೀದಿಗಳಲ್ಲಿ ರ‌್ಯಾಲಿ ಸಂಚರಿಸಿ, ಜಿಲ್ಲಾ ಕ್ರೀಡಾಂಗಣದ ಪಕ್ಕದಲ್ಲಿರುವ ಗಾಂಧೀಜಿ ಪುತ್ಥಳಿ ಬಳಿ ಮುಕ್ತಾಯಗೊಂಡಿತು. ನ್ಯಾಯವಾದಿಗಳಾದ ಶಿವಕುಮಾರ ನಾಯಕ, ಶರಣಬಸವ, ಗುರುಸ್ವಾಮಿ, ತಿಮ್ಮಪ್ಪ, ವೀರೇಶ ಚಟ್ಟಿ, ಶರಣಬಸವ ಮಾಡಗಿರಿ, ಮಹೇಂದ್ರ, ಸುಭಾಷ, ಪದಾಧಿಕಾರಿಗಳಾದ ಪೃಥ್ವಿ, ಭೀಮಣ್ಣ, ಮಹೇಂದ್ರ, ಸೋಮಶೇಖರ ಸ್ವಾಮಿ ಉಪಸ್ಥಿತರಿದ್ದರು.