oplus_2 
ಜಿಲ್ಲೆ

ಗ್ಯಾರಂಟಿ ಯೋಜನೆಗಳಲ್ಲಿರುವ ತೊಡಕುಗಳನ್ನು ಸರಿಪಡಿಸಿಕೊಳ್ಳಿ: ಮಹರೋಜ್ ಖಾನ್ ಸೂಚನೆ

Gangavati - Shashidhara Shashidhara

ರಾಯಚೂರು: ಮಹಿಳಾ ಸಬಲೀಕರಣ, ಬಡವರ ಹಾಗೂ ಯುವ ಜನಾಂಗದ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಯೋಜನೆಗಳನ್ನು ಫಲಾನುಭವಿಗಳಿಗೆ ಮುಟ್ಟಿಸಲು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕೆಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಲಬುರಗಿ ವಿಭಾಗೀಯ ಉಪಾಧ್ಯಕ್ಷ ಎಸ್.ಆರ್ ಮಹರೋಜ್ ಖಾನ್ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶುಕ್ರವಾರ ಮಾತನಾಡಿದರು.

ರಾಜ್ಯದ ಜನರ ಆರ್ಥಿಕತೆಯನ್ನು ಸುಧಾರಿಸಲು, ಯೋಜನೆಗಳು ಸಹಕಾರಿಯಾಗಿದ್ದು, ಕೆಲವು ಯೋಜನೆಗಳಲ್ಲಿ ತಾಂತ್ರಿಕ ತೊಡಕುಗಳು ಕಂಡುಬರುತ್ತಿದ್ದು, ಅಧಿಕಾರಿಗಳು ಸರಿಪಡಿಸಿಕೊಳ್ಳಬೇಕು. ಮತ್ತು ಎಲ್ಲ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಿ ಹೆಚ್ಚಿನ ಪ್ರಗತಿ ಸಾಧಿಸಬೇಕು. ಸಾಮಾಜಿಕ ಚಿಂತನೆಯೊಂದಿಗೆ ಈ ಯೋಜನೆಗಳನ್ನು ಸರ್ಕಾರದಿಂದ ರೂಪಿಸಲಾಗಿದೆ ಎಂದರು.

ಗೃಹ ಲಕ್ಷ್ಮೀ ಯೋಜನೆಯಡಿ 2023ರ ಆಗಸ್ಟ್ ತಿಂಗಳಿನಿಂದ 2024ರ ಆಗಸ್ಟ್ ತಿಂಗಳ ವರೆಗೆ ಒಟ್ಟು 867 ಕೋಟಿ ರೂ.ಗಳನ್ನು ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ಪಾವತಿಸಲಾಗಿದೆ. ಗೃಹ ಜ್ಯೋತಿ ಯೋಜನೆಯಡಿ 166.52 ಕೋಟಿ ಜೆಸ್ಕಾಂಗೆ ಪಾವತಿಸಲಾಗಿದೆ. ಯುವನಿಧಿಯಡಿ 5.65 ಕೋಟಿ, ಅನ್ನಭಾಗ್ಯ ಯೋಜನೆಯಡಿ ಜೂನ್-2024ರವರೆಗೆ 180.31 ಕೋಟಿ ರೂ,ಗಳನ್ನು ಭರಿಸಲಾಗಿದ್ದು, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ನೀಡಲಾಗಿದೆ ಎಂದರು.

ಫಲಾನುಭವಿಗಳು ಈ ಎಲ್ಲ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು, ಯೋಜನೆಗಳ ಬಗ್ಗೆ ಗೊಂದಲಗಳಿದ್ದರೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳು ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ, ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರ, ಎಡಿಸಿ ಶಿವಾನಂದ ಭಜಂತ್ರಿ, ಜಿ.ಪಂ ಸಿಪಿಒ ಡಾ.ಟಿ.ರೋಣಿ, ಪ್ರಮುಖರಾದ ಗಫೂರ್ ಸಾಬ್, ಹನುಮಂತ ಜಾಲಿಬೆಂಚಿ, ಶಂಕರಗೌಡ ತುರವಿಹಾಳ ಸೇರಿದಂತೆ ಇತರರಿದ್ದರು.