ರಾಯಚೂರು: ಗ್ರಾಮ ಪಂಚಾಯಿತಿಗಳ ಶಾಸನಬದ್ಧ ಅಧಿಕಾರವನ್ನು ಮೊಟಕುಗೊಳಿಸಿ ಅಧಿಕಾರಿಗಳು ಆಡಳಿತ ನಡೆಸುತ್ತಿದ್ದಾರೆಂದು ಆರೋಪಿಸಿ ರಾಯಚೂರು ತಾಲೂಕು ಗ್ರಾಪಂ ಸದಸ್ಯರ ಒಕ್ಕೂಟದಿಂದ ಸ್ಥಳೀಯ ಜಿಪಂ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಮೂಲಕ ತೆರಳಿ ಜಿಪಂ ಸಿಇಒ ಶಶಿಧರ ಕುರೇರಗೆ ಮನವಿ ಸಲ್ಲಿಸಿ, ಸದಸ್ಯರು ನೆಪಮಾತ್ರಕ್ಕೆ ಎಂಬಂತೆ ಮಾಡಲಾಗಿದ್ದು, ಹಲವು ಯೋಜನೆಗಳ ಕ್ರಿಯಾ ಯೋಜನೆಯನ್ನು ಅಧಿಕಾರಿಗಳೇ ಸಿದ್ಧಪಡಿಸಿ ಜಾರಿಗೊಳಿಸುತ್ತಿದ್ದಾರೆಂದು ದೂರಿದರು.
ಉದ್ಯೋಗ ಖಾತ್ರಿ, ಕೆರೆ ಹೂಳೆತ್ತುವ, ಬದು ನಿರ್ಮಾಣ, ಕೃಷಿ ಹೊಂಡ ಹೀಗೆ ಅನೇಕ ಯೋಜನೆಯ ಕ್ರಿಯಾಯೋಜನೆ ಸಿದ್ಧಪಡಿಸಿ ಮೇಲಧಿಕಾರಿಗಳ ಅನುಮೋದನೆ ಅವಶ್ಯಕತೆಯಿಲ್ಲದಿದ್ದರೂ ಕಳುಹಿಸಲಾಗುತ್ತಿದೆ. ಈ ಬಗ್ಗೆ ಸದಸ್ಯರ ಅಭಿಪ್ರಾಯ ಕೇಳುವುದಿಲ್ಲ. 15ನೇ ಹಣಕಾಸು ಯೋಜನೆ ಅನುದಾನ ಬಳಕೆಗೂ ಹಲವು ನಿರ್ಬಂಧ ಹೇರಲಾಗಿದೆ. ಸದಸ್ಯರು ಒಂದು ಕಾಮಗಾರಿಯನ್ನು ಸೂಚಿಸುವಂತಿಲ್ಲ. ಪಂಚಾಯಿತಿಯ ಶಾಸನಬದ್ಧ ಅನುದಾನವನ್ನು ರಾಜ್ಯ ಮಟ್ಟದಿಂದಲೇ ಶೇ.60ರಷ್ಟು ವಿದ್ಯುತ್ ಬಿಲ್‌ಗೆ ಬಳಸಲಾಗುತ್ತಿದೆ. ಸದಸ್ಯರಿಗೆ ಅಧಿಕಾರವೇ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.
ಗ್ರಾಮ ಸಭೆಯಲ್ಲಿ ನಿರ್ಣಯಿಸಿ ಪಂಚಾಯಿತಿ ಅನುಮೋದಿಸಿದ ಕಾಮಗಾರಿಗಳನ್ನು ತಡೆ ಹಿಡಿಯಬಾರದು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. 15ನೇ ಹಣಕಾಸು ಯೋಜನೆ ಅನುದಾನ ಬಳಕೆಗೆ ವಿಧಿಸಿರುವ ನಿರ್ಬಂಧವನ್ನು ಸಡಿಲಗೊಳಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು. ಪದಾಧಿಕಾರಿಗಳಾದ ಮಹೆಬೂಬ್, ಶಂಕ್ರಮ್ಮ, ತಿರುಮಲರೆಡ್ಡಿ, ರವೀಂದ್ರರೆಡ್ಡಿ, ಎನ್.ಕಿರಣ, ವಿಶ್ವನಾಥ ರೆಡ್ಡಿ, ಕಲ್ಲಪ್ಪ ಪಾಲ್ಗೊಂಡಿದ್ದರು.