ಜಿಲ್ಲೆ

ಗ್ರಾಪಂ ಅಧ್ಯಕ್ಷರ ಅಧಿಕಾರ ಮೊಟಕು ಬೇಡ

ರಾಯಚೂರು: ಗ್ರಾಮ ಪಂಚಾಯಿತಿ ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸುವ ಮೂಲಕ ಅಧಿಕಾರ ವಿಕೇಂದ್ರೀಕರಣದ ಕತ್ತು ಹಿಸುಕುವ ಕೆಲಸವನ್ನು ಸರ್ಕಾರ ಮಾಡುತ್ತಿದ್ದು, ಕೂಡಲೇ ಆದೇಶ ಹಿಂಪಡೆಯಬೇಕು ಎಂದು ಜೆಡಿಎಸ್ ಗ್ರಾಮೀಣ ಘಟಕದ ಅಧ್ಯಕ್ಷ ನಿಜಾಮುದ್ದೀನ್ ಒತ್ತಾಯಿಸಿದರು.

ಸ್ಥಳೀಯ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಧೀನ ಕಾರ್ಯದರ್ಶಿ ಆ.19ರಂದು ಆದೇಶ ಹೊರಡಿಸಿ ಚುನಾಯಿತ ಮಂಡಳಿಗಿದ್ದ ಕೆಲವು ಅಧಿಕಾರ ಪಿಡಿಒಗೆ ನೀಡಿದ್ದಾರೆ. ಕಟ್ಟಡ ಪರವಾನಗಿ ನೀಡುವ ಅಧಿಕಾರವನ್ನು ಅಧ್ಯಕ್ಷರಿಂದ ಪಿಡಿಒಗೆ ನೀಡಲಾಗಿದೆ. ಕೈಗಾರಿಕೆಗಳಿಗೆ ಅನುಮತಿ ನೀಡುವ ಅಧಿಕಾರವನ್ನು ಅಧ್ಯಕ್ಷರಿಂದ ಹಿಂಪಡೆಯಲಾಗಿದೆ. ಸಾಮಾನ್ಯ ಸಭೆ ಕರೆಯುವ ಅಧಿಕಾರವೂ ಅಧ್ಯಕ್ಷರಿಗೆ ಇಲ್ಲದಂತೆ ಮಾಡಲಾಗಿದೆ ಎಂದು ದೂರಿದರು.

ಅಧಿಕಾರ ವಿಕೇಂದ್ರೀಕರಣ ಮಾಡುವುದಾಗಿ ಹೇಳುವ ಸರ್ಕಾರ ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಹಾಳು ಮಾಡಲು ಹೊರಟಿದೆ. ಮಸೂದೆಗೆ ತಿದ್ದುಪಡಿ ತರುವ ಕುರಿತು ಸದನದಲ್ಲಿ ಪ್ರಸ್ತಾಪಿಸದೆ ಹಿಂಬಾಗಿಲಿನಿಂದ ಅಧಿಕಾರಿಗಳ ಮೂಲಕ ಚುನಾಯಿತ ಪ್ರತಿನಿಧಿಗಳ ಅಧಿಕಾರ ರದ್ದುಗೊಳಿಸುವ ಕೆಲಸ ಮಾಡಲಾಗುತ್ತಿದೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಶರಣಗೌಡ ಬಯ್ಯಪುರ ಕೂಡಲೇ ಆದೇಶ ರದ್ದುಪಡಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲವಾದಲ್ಲಿ ನ್ಯಾಯಾಂಗ ಹೋರಾಟ ನಡೆಸಲಾಗುವುದು ಎಂದು ನಿಜಾಮುದ್ದೀನ್ ತಿಳಿಸಿದರು. ಜಿಪಂ ಮಾಜಿ ಸದಸ್ಯರಾದ ಜಾಫರ್ ಅಲಿ ಪಟೇಲ್, ಖಾಸಿಂ ನಾಯಕ, ಪ್ರಮುಖರಾದ ಪ್ರದೀಪಕುಮಾರ, ಮಲ್ಲಿಕಾರ್ಜುನ ಗೌಡ ಉಪಸ್ಥಿತರಿದ್ದರು.