ರಾಯಚೂರು: ಸಂಗೀತ, ಸಾಹಿತ್ಯಕ್ಕೆ ಹೆಸರುವಾಸಿಯಾದ ರಾಯಚೂರು ಅನೇಕ ಹರಿದಾಸರ ನೆಲಬೀಡಾಗಿದೆ. ಆದ್ದರಿಂದಲೇ ಜಿಲ್ಲೆಯಲ್ಲಿ ಸಂಸ್ಕಾರವನ್ನು ಕಾಣಬಹುದಾಗಿದ್ದು, ಈ ಸಂಸ್ಕಾರ ಇಂದು ಗೋವಿಂದ ಗಾನ ಕಾರ್ಯಕ್ರಮದಲ್ಲಿ ಪ್ರಕಟಗೊಂಡಿದೆ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.
ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಹರಿದಾಸ ಸೇವಾ ಇಂಟರ್ ನ್ಯಾಷನಲ್ ಟ್ರಸ್ಟ್ ಹಾಗೂ ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ಅಸ್ಕಿಹಾಳ ಗೋವಿಂದ ದಾಸರ ಸ್ಮರಣೋತ್ಸವ ದಶಮಾನೋತ್ಸವ ಹಿನ್ನೆಲೆ ಶ್ರೀವಾರಿ ಊಂಜಲ ಉತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಭಾನುವಾರ ಅನುಗ್ರಹ ಸಂದೇಶ ನೀಡಿದರು.
ಜಿಲ್ಲೆಯ ಜನರಿಗೆ ಭಕ್ತಿಯನ್ನು ಕಾಣಲು ವೇದಿಕೆ ಬೇಕಾಗಿತ್ತು. ದೇಶ ವಿದೇಶದಲ್ಲಿ ಸಂಗೀತ ವಲಯದಲ್ಲಿ ಹೆಸರುವಾಸಿಯಾದ ಗಾಯಕ ರಾಯಚೂರು ಶೇಷಗಿರಿದಾಸ ಒದಗಿಸಿಕೊಟ್ಟಿದ್ದಾರೆ. ಹತ್ತು ವರ್ಷಗಳಿಂದ ನಿರಂತರವಾಗಿ ಅಸ್ಕಿಹಾಳ ಗೋವಿಂದ ದಾಸರ ಸ್ಮರಣೋತ್ಸವವನ್ನು ಆಚರಿಸುತ್ತಾ ದಾಸವಾಣಿಯನ್ನು ಜನರ ಮನಸ್ಸಿಗೆ ನೀಡುವ ಕೆಸಲವನ್ನು ಕಾರ್ಯಕ್ರಮದಲ್ಲಿ ಮಾಡಲಾಗುತ್ತಿದೆ ಎಂದರು.
ಭಕ್ತರು ಗೋವಿಂದನ ಬಳಿ ತೆರಳುತ್ತಾರೆ ಆದರೆ ಇಲ್ಲಿ ಭಕ್ತರನ್ನು ಕಾಣಲು ಗೋವಿಂದನೇ ಬಂದಿದ್ದಾನೆ. ಎಲ್ಲರನ್ನು ಅನುಗ್ರಹಿಸುವ ಗೋವಿಂದನ ಕರುಣೆಯನ್ನು ಎಣಿಸಲು ಸಾಧ್ಯವಿಲ್ಲ. ಭಕ್ತರು ಎಲ್ಲಿ ಭಜಿಸುತ್ತಾರೆ ಅಲ್ಲಿ ಯೇ ಭಗವಂತ ನೆಲೆಸುತ್ತಾನೆ ಎಂಬುದಕ್ಕೆ ಗೋವಿಂದ ಗಾಯನ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಊಂಜಲ ಉತ್ಸವ, ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ರಾಯಚೂರು ಶೇಷಗಿರಿದಾಸ ಹಾಗೂ ಅನಂತ ಕುಲಕರ್ಣಿ ಅವರಿಂದ ದಾಸವಾಣಿ ಜುಗಲ್ಬಂದಿ ಸೇರಿದಂತೆ ಸಾಮೂಹಿಕ ದಾಸವಾಣಿ ಗಾಯನ ಕಾರ್ಯಕ್ರಮಗಳು ಜರುಗಿದವು.