oplus_2 
ಜಿಲ್ಲೆ

ಸರ್ಕಾರದ ಸೌಲಭ್ಯ ಸರಿಯಾಗಿ ತಲುಪಿಸಿ: ಡಿಸಿ ನಿತೀಶ ಸೂಚನೆ

ರಾಯಚೂರು: ಪರಿಶಿಷ್ಟ ಜಾತಿ ಮತ್ತು ಪಂಗಡ ಜನಾಂಗದ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನವನ್ನು ನಿಗದಿತ ಅವಧಿಯೊಳಗೆ ಖರ್ಚು ಮಾಡಿ, ಅರ್ಹ ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸಬೇಕು ಎಂದು ಡಿಸಿ ಕೆ.ನಿತೀಶ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿಯ ಸಭಾಂಗಣದಲ್ಲಿ ಎಸ್ಸಿಪಿ, ಟಿಎಸ್ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಅತಿ ಹೆಚ್ಚು ಎಸ್ಸಿ, ಎಸ್ಟಿ ಜನಾಂಗದವರು ವಾಸವಾಗಿದ್ದು, ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳು ಸರಿಯಾಗಿ ತಲುಪಿಸಲು ಹಾಗೂ ಸಮುದಾಯಗಳ ಅಭಿವೃದ್ಧಿಗಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಎಸ್ಸಿ, ಎಸ್ಟಿ ಸಮುದಾಯಕ್ಕಾಗಿ ಮೀಸಲಿಟ್ಟ ಅನುದಾನವು ನಿಗದಿತ ಅವಧಿಯಲ್ಲಿ ಬಳಸದೇ ವಿಳಂಬ ಮಾಡಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಯಾಗಿಸಿ, ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಜಿ.ಪಂ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ, ಸಮಾಜ ಕಲ್ಯಾಣ ಇಲಾಖೆಯ ಡಿಡಿ ಚಿದಾನಂದ, ಕೃಷಿ ಇಲಾಖೆಯ ಪ್ರಭಾರ ಜೆಡಿ ಜಯಪ್ರಕಾಶ, ಎಸ್ಟಿ ಕಲ್ಯಾಣಾಧಿಕಾರಿ ಶ್ರೀಶೈಲ ಕಾಚಾಪೂರ, ಆಹಾರ ಇಲಾಖೆಯ ಡಿಡಿ ಕೃಷ್ಣ ಶಾವಂತಗೇರಾ, ಶಾಲಾ ಶಿಕ್ಷಣ ಇಲಾಖೆಯ ಡಿಡಿ ಕೆ.ಡಿ.ಬಡಿಗೇರ, ತೋಟಗಾರಿಕೆ ಇಲಾಖೆಯ ಡಿಡಿ ಮಹ್ಮದ್ ಅಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಡಿಡಿ ನವೀನಕುಮಾರ್ ಸೇರಿದಂತೆ ಇತರರಿದ್ದರು.