ರಾಯಚೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉದ್ಯೋಗ ಸೃಷ್ಠಿ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಿಪಿಎಂ ರಾಜ್ಯ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್ ಮುಜಿಬ್ ಹೇಳಿದರು.
ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸಿಪಿಎಂ 14ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಗುರುವಾರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಿರುವ ಉದ್ಯೋಗಗಳಿಗೆ ಭದ್ರತೆ ನೀಡುತ್ತಿಲ್ಲ. ಕಾಯಂ ನೇಮಕಾತಿ ಪದ್ದತಿ ತೆಗೆದುಹಾಕಿ ವ್ಯವಸ್ಥಿತವಾಗಿ ಗುತ್ತಿಗೆ ಪದ್ದತಿ ಜಾರಿ ಮಾಡುವ ಮೂಲಕ ಕೆಲಸದಲ್ಲಿ ಅಭದ್ರತೆ ಸೃಷ್ಠಿಸಿವೆ ಎಂದರು.
ಆಳುವ ಸರ್ಕಾರಗಳು ಕಾರ್ಮಿಕರ ಪರವಾಗಿದ್ದ ಸೌಲಭ್ಯಗಳ ಕಾನೂನುಗಳನ್ನು ತೆಗೆದು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದು ಕಾರ್ಮಿಕರನ್ನು ಬಿದಿಪಾಲು ಮಾಡುತ್ತಿವೆ ಎಂದು ಅಸಮಧಾನ ಹೊರಹಾಕಿದರು.
ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿ ಮಾಡದೇ, ಮಾಲೀಕರ ಪರವಾದ ನೀತಿಗಳನ್ನು ಜಾರಿಗೆ ತರಲಾಗುತ್ತಿದೆ. ದೇಶ ಕಟ್ಟುವ ರೈತ, ಕಾರ್ಮಿಕರ ವಿರೋಧಿ ನೀತಿಗಳನ್ನು ಜಾರಿಗೆ ತಂದ ಸರ್ಕಾರ ರೈತರನ್ನು, ಕಾರ್ಮಿಕರನ್ನು ಒಕ್ಕಲೆಬ್ಬಿಸುತ್ತಿದೆ ಎಂದು ತಿಳಿಸಿದರು.
ಇನ್ನೋರ್ವ ರಾಜ್ಯ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ.ಕೆ.ಪ್ರಕಾಶ ಮಾತನಾಡಿ, ದೇಶದಲ್ಲಿ ಕೇಂದ್ರ ಸರ್ಕಾರ ಧರ್ಮ ಮತ್ತು ಜಾತಿ ಹೆಸರಿನಲ್ಲಿ ಜನರನ್ನು ವಿಭಜನೆ ಮಾಡುತ್ತಿದೆ. ಬಡತನ, ನಿರುದ್ಯೋಗ, ರೈತರ ಬೆಳೆದ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ನೀಡದೇ ಜನಸಾಮಾನ್ಯರನ್ನು ಸಂಕಷ್ಟದಲ್ಲಿ ಸಿಲುಕಿಸಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು ನಗರದ ಸಾರ್ವಜನಿಕ ಉದ್ಯಾನದಿಂದ, ಬಸ್ ನಿಲ್ದಾಣ, ನಗರಸಭೆ, ಡಿಸಿ ಕಚೇರಿ, ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ರಂಗಮಂದಿರದ ವರೆಗೆ ಬೃಹತ್ ರ‌್ಯಾಲಿ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ, ಪ್ರಮುಖರಾದ ಎಚ್.ಪದ್ಮಾ, ನರಸಣ್ಣ ನಾಯಕ, ಡಿ.ಎಸ್.ಶರಣಬಸವ, ಶಬ್ಬೀರ್, ಗಿರಿಯಪ್ಪ ಪೂಜಾರಿ, ದೇವಿಂದ್ರಗೌಡ, ಶೇಖಮ್ಮ ದೇಸಾಯಿ, ವರಲಕ್ಷ್ಮೀ, ರಮೇಶ ವಿರಾಪೂರ ಸೇರಿದಂತೆ ಅನೇಕರಿದ್ದರು.