oplus_2 
ಜಿಲ್ಲೆ

ರಾಜ್ಯದಲ್ಲಿ ಕನ್ನಡಕ್ಕೆ ಅಸ್ತಿತ್ವವಿಲ್ಲ: ರಾಘವೇಂದ್ರ ಕುಷ್ಟಗಿ ಅಸಮಧಾನ

ರಾಯಚೂರು: ರಾಯಚೂರಿನಲ್ಲಿ ಜರುಗಲಿರುವ ಗೋಕಾಕ್ ಚಳುವಳಿಯ ಹಿನ್ನೋಟ, ಮುನ್ನೋಟ ಸಮಾವೇಶವು ಕೇವಲ ಉತ್ಸುಕದ ಭಾಷಣಗಳ ಸಮಾವೇಶವಾಗದೇ ನಾಡಿಗೆ ಪ್ರಯೋಜನವಾಗುವಂತಹ ಕಾರ್ಯಕ್ರಮವಾಗಬೇಕೆಂದು ಜನಸಂಗ್ರಾಮ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಕನ್ನಡಕ್ಕೆ ಅಸ್ತಿತ್ವ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕನ್ನಡಕ್ಕೆ ಅಗ್ರ ಸ್ಥಾನ, ಕನ್ನಡ ಶಾಲೆಗಳಲ್ಲಿ ಕಡ್ಡಾಯ ಕನ್ನಡ ಶಿಕ್ಷಣ, ಹಾಗೂ ಕನ್ನಡಿಗರ ಘನತೆಯನ್ನು ಹೆಚ್ಚಿಸುವ ಆಶಯವನ್ನು ಗೋಕಾಕ್ ಚಳುವಳಿ ಹೊಂದಿತ್ತು. ಆದರೆ ಪ್ರಸ್ತುತ ದಿನಮಾನಗಳಲ್ಲಿ ಕನ್ನಡ ಶಾಲೆಗಳು ಮುಚ್ಚಿ ಹೋಗುತ್ತಿವೆ. ಸರ್ಕಾರವೇ ಇಂಗ್ಲಿಷ್ ಮೀಡಿಯಂ ಶಾಲೆಗಳನ್ನು ನಡೆಸುತ್ತಾ. ಆಂಗ್ಲ ಶಾಲೆಗಳಿಗೆ ಪರವಾನಿಗೆ ನೀಡುತ್ತಿರುವುದು ಸರಿಯಾದ ನಡೆಯಲ್ಲ ಎಂದರು.

ಗೋಕಾಕ್ ಚಳುವಳಿಗಾಗಿ ರಾಯಚೂರು ಜಿಲ್ಲೆಯ ಎನ್.ಕೆ ಕುಲಕರ್ಣಿ, ಶಾಂತರಸರು, ಚಂದ್ರಶೇಖರ ಪಾಟೀಲ್ ಹೋರಾಟಗಳನ್ನು ಮಾಡಿದ್ದರು. ಇದೀಗ ಜಿಲ್ಲೆಯಲ್ಲಿ ಗೋಕಾಕ್ ಚಳುವಳಿಯ ಹಿನ್ನೆಲೆ ಮತ್ತು ಮಹತ್ವವನ್ನು ತಿಳಿಸುವ ಬಗ್ಗೆ ಸರ್ಕಾರ ಮಹತ್ವಾಕಾಂಕ್ಷೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಗೋಕಾಕ್ ಚಳುವಳಿಯ ಬಗ್ಗೆ ಚರ್ಚೆಗಳಾಗುತ್ತವೆಯೋ ಅಥವಾ ಉತಸುಕದ ಭಾಷಣಗಳಿಗೆ ಕಾರ್ಯಕ್ರಮ ಸೀಮಿತವಾಗುತ್ತದೆಯೋ ಎಂಬ ಅನುಮಾನವಿದೆ ಎಂದರು.

2023-24ನೇ ಸಾಲಿನಲ್ಲಿ 557 ಕನ್ನಡ ಶಾಲೆಗಳು ರಾಜ್ಯದಲ್ಲಿ ಮುಚ್ಚಲ್ಪಟ್ಟಿವೆ. 2086 ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಸರ್ಕಾರ ನಡೆಸುತ್ತಿದೆ. 17,000 ಆಂಗ್ಲ ಶಾಲೆಗಳಿಗೆ ಪರವಾನಿಗೆ ನೀಡಿರುವ ಸರ್ಕಾರ ಕನ್ನಡ ಕಡ್ಡಾಯಕ್ಕೆ ಮುಂದಾಗುತ್ತಿಲ್ಲ ಜತೆಗೆ ಕಲ್ಯಾಣ ಕರ್ನಾಟಕದಲ್ಲಿ 18,183 ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ. ಭರ್ತಿ ಮಾಡಿಕೊಳ್ಳದ ಸರ್ಕಾರ ನಡೆ ನೋವು ತಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಜಾನ್‌ವೆಸ್ಲಿ, ಖಾಜಾ ಅಸ್ಲಾಂ, ವೀರಣ್ಣ ಭಂಡಾರಿ, ಪರಪ್ಪ ನಾಗೋಲಿ ಸೇರಿದಂತೆ ಇತರರಿದ್ದರು.