ರಾಯಚೂರು: ರೈತರಿಗೆ ಆರ್ಥಿಕ ಹೊರೆ ಉಂಟು ಮಾಡುತ್ತಿರುವ ರಸಗೊಬ್ಬರ, ಬಿತ್ತನೆ ಬೀಜದ ಬೆಲೆ ಏರಿಕೆಯನ್ನು ಖಂಡಿಸಿ ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಶನಿವಾರ ಪ್ರತಿಭಟನೆ ನಡೆಸಿತು.
ನಂತರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಕರೊನಾ, ಲಾಕ್‌ಡೌನ್‌ನಿಂದ ರೈತರು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ರಸಗೊಬ್ಬರ, ಬಿತ್ತನೆ ಬೀಜ ಮತ್ತು ವಿದ್ಯುತ್ ದರ ಏರಿಕೆ ಮಾಡಿರುವುದು ಸರಿಯಲ್ಲ ಎಂದರು.
ರೈತರು ಕೃಷಿ ಚಟುವಟಿಕೆಗಾಗಿ ವಿವಿಧ ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲ ಮನ್ನಾ ಮಾಡಬೇಕು. ಕರೊನಾ ವೇಳೆ ರೈತರಿಗೆ 5 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಉಚಿತ ಲಸಿಕೆ ಮತ್ತು ಔಷಧಗಳನ್ನು ಪೂರೈಸಬೇಕು. ಕೃಷಿ ಕಾಯಕದಲ್ಲಿ ಮೃತಪಟ್ಟ ರೈತರನ್ನು ಕರೊನಾ ವಾರಿಯರ್ಸ್ ಎಂದು ಗುರುತಿಸಿ ಪರಿಹಾರ ನೀಡಬೇಕು. ಬೆಂಬಲ ಬೆಲೆಯಲ್ಲಿ ರಾಗಿ, ಭತ್ತ, ಜೋಳ ಖರೀದಿ ಮಾಡಿರುವ ರೈತರಿಗೆ ಹಣ ಪಾವತಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ 24 ಗಂಟೆ ವಿದ್ಯುತ್ ಪೂರೈಸಬೇಕು. ಜಮೀನುಗಳಿಗೆ ತೆರಳುವ ರಸ್ತೆಗಳನ್ನು ದುರಸ್ಥಿಗೊಳಿಸಬೇಕು ಮತ್ತು ನರೇಗಾ ಕೆಲಸವನ್ನು 200 ದಿನಕ್ಕೆ ಹೆಚ್ಚಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ, ಪದಾಧಿಕಾರಿಗಳಾದ ನರಸಪ್ಪ, ಮಹಾದೇವ, ಉಮಾದೇವಿ ನಾಯಕ, ರೂಪಾ ನಾಯಕ, ಬಸವರಾಜ ನಾಯಕ, ತಾಯಪ್ಪ, ಹುಲುಗಯ್ಯ, ತಿಮ್ಮಣ್ಣ, ಅಚ್ಚುತರಾಯ, ರಾಜಾಸಾಬ ಪಾಲ್ಗೊಂಡಿದ್ದರು.