ರಾಯಚೂರು: ರೈತರ ಜಮೀನು, ಧಾರ್ಮಿಕ ಕ್ಷೇತ್ರಗಳು ಹಾಗೂ ಸರ್ಕಾರಿ ಜಮೀನಗಳನ್ನು ವಕ್ಫ್ ಆಸ್ತಿಯೆಂದು ನೊಟೀಸ್ ನೀಡುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದ ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಇದೇ ವೇಳೆ ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ ಮಾತನಾಡಿ, ಒಂದು ಸಮುದಾಯದ ಅಭಿವೃದ್ಧಿಗಾಗಿ ವಕ್ಫ್ ನೀತಿ ಹುಟ್ಟಿಕೊಂಡಿದ್ದು, ಶತಮಾನಗಳಿಂದ ರಾಜ್ಯದಲ್ಲಿರುವ ಮಂದಿರಗಳ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಹೇಳಿರುವುದು ಆಶ್ಚರ್ಯಕರ ಹಾಗೂ ಖಂಡನೀಯವಾಗಿದೆ. ರೈತರ ಭೂಮಿ ರೈತರಿಗೆ ಉಳಿಯಲಿ ಎನ್ನುವ ಉದ್ದೇಶದಿಂದ ಬಿಜೆಪಿ ಪಕ್ಷ ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ ಮೂಲಕ ರಾಜ್ಯಾದ್ಯಾಂತ ಆಂದೋಲನ ನಡೆಸಲಾಗುತ್ತಿದೆ ಎಂದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ,ದೇಶದ ಜನತೆಯ ಹಿತದೃಷ್ಠಿಯಿಂದ ಹಾಗೂ ವಕ್ಫ್ ಮಂಡಳಿಯಲ್ಲಿ ಆಗುತ್ತಿದ್ದ ಅಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ವಕ್ಫ್ ಕಾಯ್ದೆಗೆ ತಿದ್ದುಪಡಿ ಜಾರಿಗೊಳಿಸಲು ನಿರ್ಧಾರ ಕೈಗೊಳ್ಳುತ್ತಿದ್ದಂತೆಯೇ ರಾಜ್ಯದ ಕಾಂಗ್ರೆಸ್ ಸರ್ಕಾರ ವಕ್ಫ್ ಮಂಡಳಿ ಮೂಲಕ ಸಾರ್ವಜನಿಕ ಆಸ್ತಿಯನ್ನು ಕಬಳಿಸಲು ಮುಂದಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ನಗರ ಘಟಕದ ಅದ್ಯಕ್ಷ ರಾಘವೇಂದ್ರ ಉಟ್ಕೂರು, ನಗರಸಭೆ ಸದಸ್ಯ ಈ.ಶಶಿರಾಜ, ಪ್ರಮುಖರಾದ ಕೆ.ಎಂ.ಪಾಟೀಲ್, ಶ್ರೀನಿವಾಸರೆಡ್ಡಿ, ವಿಜಯಕುಮಾರ ಸಜ್ಜನ್, ರಾಜಕುಮಾರ, ಡಾ.ನಾಗರಾಜ ಬಾಲ್ಕಿ, ಶರಣಮ್ಮ ಕಾಮರೆಡ್ಡಿ, ರಾಮಚಂದ್ರ ಕಡಗೋಲ, ಪಲಗುಲ ನಾಗರಾಜ, ನಾಗವೇಣಿ ಸಾಹುಕಾರ, ಸಂತೋಷ ರಾಜಗುರು, ಬಿ.ನಾಗರಾಜ, ಎನ್.ವಿನಾಯಕರಾವ್, ವಿ.ನಾಗರಾಜ, ರಾಜಶೇಖರ್, ಸುರೇಶಬಾಬು, ಸಿದ್ದನಗೌಡ ನೆಲಹಾಳ, ಜಿ.ಶಂಕರರೆಡ್ಡಿ, ಅನಿತಾ, ಸುಶೀಲಾ ಗಣೇಶ, ಜಿ.ಮಹೇಂದ್ರರೆಡ್ಡಿ ಸೇರಿದಂತೆ ಇತರರಿದ್ದರು.