ಇಪಿಎಸ್ ನೌಕರರಿಗೆ ಪಿಂಚಣಿಯಲ್ಲಿ ಆಗುತ್ತಿರುವ ಅನ್ಯಾಯ ತಡೆಗಟ್ಟುವಂತೆ ಒತ್ತಾಯಿಸಿ ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಇಪಿಎಸ್-95 ಹೋರಾಟ ಸಮಿತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಸಂಘದ ಅಧ್ಯಕ್ಷ ವೀರಭದ್ರಯ್ಯ, ಪದಾಧಿಕಾರಿಗಳ ವೀರಭದ್ರಪ್ಪ, ಬಾಲಪ್ಪ, ಶರಣಯ್ಯ, ಭೀಮಸಿಂಗರಾವ್, ಉಮೇಶ, ರುದ್ರಯ್ಯ ಗುಣಾರಿ ಇದ್ದರು. 
ಜಿಲ್ಲೆ

ಇಪಿಎಸ್ ನೌಕರರಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟಿ

ಕುರುವತ್ತಿ ಶ್ರೀಕಾಂತಪ್ಪ

ರಾಯಚೂರು: ದೇಶದಲ್ಲಿನ 75 ಲಕ್ಷ ಇಪಿಎಸ್ ನೌಕರರಿಗೆ ನಿವೃತ್ತಿ ವೇತನದಲ್ಲಿ ಆಗುತ್ತಿರುವ ಅನ್ಯಾಯ ಖಂಡಿಸಿ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಇಪಿಎಸ್-95 ಹೋರಾಟ ಸಮಿತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ನಂತರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಈ ಕುರಿತು ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬರಲಾಗುತ್ತಿದ್ದರೂ ಯಾವುದೇ ಕ್ರಮವಾಗುತ್ತಿಲ್ಲ ಎಂದು ದೂರಿದರು.

ನೌಕರರ ವೇತನದಿಂದ ನೌಕರರ ಪಾಲಾಗಿ ಪ್ರತಿ ತಿಂಗಳು 417 ರೂ. ನಿಂದ 1,250 ರೂ.ವರೆಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಹಣವನ್ನು ಕಡಿತ ಮಾಡಲಾಗಿದೆ. ಆದರೆ ನಿವೃತ್ತಿ ನಂತರದಲ್ಲಿ ಕೇವಲ 1,171 ರೂ. ಮಾತ್ರ ನೀಡುವ ಮೂಲಕ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿದರು.

ಬೆಲೆ ಏರಿಕೆ ಹೆಚ್ಚಾಗುತ್ತಿದ್ದು, ಅದಕ್ಕೆ ತಕ್ಕಂತೆ ನಿವೃತ್ತ ನೌಕರರಿಗೆ ಕನಿಷ್ಠ 7,500 ರೂ. ಪಿಂಚಣಿ ನಿಗದಿಪಡಿಸಬೇಕು. ಕೋಶಿಯಾರಿ ಸಮಿತಿ ಶಿಫಾರಸಿನಂತೆ 3 ಸಾವಿರ ರೂ. ಭತ್ಯೆ ನೀಡಬೇಕು. ನಿವೃತ್ತ ನೌಕರರಿಗೆ ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು. ಇಪಿಎಸ್-95 ಯೋಜನೆ ವ್ಯಾಪ್ತಿಗೆ ಬಾರದ ನಿವೃತ್ತ ನೌಕರರಿಗೆ 5 ಸಾವಿರ ರೂ. ಪಿಂಚಣಿ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ವೀರಭದ್ರಯ್ಯ, ಪದಾಧಿಕಾರಿಗಳ ವೀರಭದ್ರಪ್ಪ, ಬಾಲಪ್ಪ, ಶರಣಯ್ಯ, ಭೀಮಸಿಂಗರಾವ್, ಉಮೇಶ, ರುದ್ರಯ್ಯ ಗುಣಾರಿ ಪಾಲ್ಗೊಂಡಿದ್ದರು.