ರಾಯಚೂರು: ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾಗುವ ಪರೀಕ್ಷೆಗಳ ಕುರಿತು ಆದೇಶಗಳು, ಸಭೆಗಳ ಬಗ್ಗೆ ಮಾಹಿತಿ ನೀಡಲು ಮತ್ತು ಪರೀಕ್ಷೆಗಳ ಹಾಜರಾತಿ ಹಂಚಿಕೊಳ್ಳು ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಿಬ್ಬಂದಿಗಳಿಂದ ಸೃಷ್ಠಿಸಲಾದ ಎರಡು ವಾಟ್ಸಾಪ್ ಗ್ರೂಪ್‌ಗಳ ಹೆಸರು ಬದಲಾಯಿಸುವುದಲ್ಲದೇ ಗ್ರೂಪ್‌ಗಳಲ್ಲಿ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡುವ ಅಪ್ಲಿಕೇಷನ್ ಲಿಂಕ್ ಹಾಕಿರುವ ಘಟನೆ ನಗರದಲ್ಲಿ ಬುಧವಾರ ಜರುಗಿದೆ.
ಇಲಾಖೆ ಸಿಬ್ಬಂದಿಯಿಂದ KEA Village accountant exam ಹಾಗೂ UG/CET Exam 2024 ಎಂಬ ಎರಡು ಗ್ರೂಪ್‌ಗಳನ್ನು ಕ್ರಿಯೇಟ್ ಮಾಡಲಾಗಿತ್ತು. ನ.13ರ ಮದ್ಯಾಹ್ನ 3.38ಕ್ಕೆ ಅದೇ ಗ್ರೂಪ್‌ನಲ್ಲಿರುವ ವ್ಯಕ್ತಿಯೊಬ್ಬರ ಸಂಖ್ಯೆಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ಗ್ರೂಪ್ ಹೆಸರು ಬದಲಾಯಿಸಲಾಗಿದೆ. ಇದಲ್ಲದೇ ಗ್ರೂಪ್‌ಗಳ ಚಿತ್ರವನ್ನು ಎಸ್ಬಿಐ ಚಿತ್ರಕ್ಕೆ ಬದಲು ಮಾಡಿ ಗ್ರೂಪಿನಲ್ಲಿ SBI SELF PAN UPDATE1.apk ಎಂಬ ಅಪ್ಲಿಕೇಷನ್ ಲಿಂಕ್ ಹಾಕಿದ್ದಾರೆ.
ಈ ಲಿಂಕ್ ಕ್ಲಿಕ್ ಮಾಡಿದರೆ ಕ್ಲಿಕ್ ಮಾಡಿದವರ ಅಕೌಂಟ್ ಹ್ಯಾಕ್ ಆಗುತ್ತದೆ. ಯಾರೂ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ, ಮೆಸೇಜ್ ಹಾಕಿದವರ‌್ಯಾರು ತಕ್ಷಣ ಡೆಲೀಟ್ ಮಾಡುವಂತೆ ಪ್ರತ್ಯುತ್ತರಗಳೂ ಕೂಡ ಗ್ರೂಪ್‌ನ ಇತರೆ ಸದಸ್ಯರು ನೀಡಿದ್ದು, ನಂತರ ಮಂಗಳೂರು ಪೊಲೀಸ್ ಠಾಣೆಯ ಪಿಎಸ್‌ಐ ಎನ್ನಲಾದ ವ್ಯಕ್ತಿಯೊಬ್ಬರು ಇದೇ ಅಪ್ಲಿಕೇಷನ್ ಲಿಂಕ್ ಕುರಿತು ಜಾಗೃತಿ ಮೂಡಿಸಿರುವ ವಿಡಿಯೋ ಸಹ ಹಾಕಲಾಗಿದೆ. ಗ್ರೂಪ್‌ನ ಇತರೆ ಸದಸ್ಯರು ಇದರಿಂದ ಗಾಬರಿಗೊಂಡಿದ್ದು, ತಮ್ಮ ಅಕೌಂಟ್ ಹ್ಯಾಕ್ ಆಗಿರಬಹುದೇ ಎಂಬ ಆತಂಕದಲ್ಲಿದ್ದಾರೆ.
ಮೆಸೇಜ್ ಹೇಗೆ ಬಂತು: ಜಿಲ್ಲೆಯ ಉಪನ್ಯಾಸಕಿಯೊಬ್ಬರ ನಂಬರ್ ಹ್ಯಾಕ್ ಆಗಿದ್ದು, ಹ್ಯಾಕರ್‌ಗಳು ಅವರ ನಂಬರ್ ಬಳಸಿಕೊಂಡು ಇಲಾಖೆಯ ಎರಡು ಗ್ರೂಪ್‌ಗಳ ಹೆಸರು ಬದಲಾಯಿಸಿದ್ದಾರೆ. ಜತೆಗೆ ಅಪ್ಲಿಕೇಷನ್ ಲಿಂಕ್‌ಗಳನ್ನು ಕಳಿಸಿದ್ದಾರೆ.
ಕಾಲೇಜು ಉಪನ್ಯಾಸಕರು, ಅಧಿಕಾರಿಗಳು ಇರುವ ಈ ಗ್ರೂಪ್‌ನಲ್ಲಿ ಈ ರೀತಿಯ ವಂಚನೆ ಪ್ರಕರಣದ ಯತ್ನ ನಡೆದಿರುವುದು ಆಶ್ಚರ್ಯಕರ ಸಂಗತಿಯಾಗಿದ್ದು, ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರು ಎಚ್ಚೆತ್ತುಕೊಳ್ಳಬೇಕಾಗಿದೆ.
ಇಲಾಖೆಯ ಸಿಬ್ಬಂದಿಯಿಂದ ಪರೀಕ್ಷಾ ಚಟುವಟಿಕೆಗಳ ಸಂವಹನಕ್ಕಾಗಿ ಗ್ರೂಪ್ ಕ್ರಿಯೇಟ್ ಮಾಡಲಾಗಿದೆ. ಗ್ರೂಪ್ ನಲ್ಲಿ ವಂಚನೆಯ ದೃಷ್ಠಿಯಿಂದ ಲಿಂಕ್ ಗಳನ್ನು ಕಳಿಸಲಾಗಿದೆ ಎಂಬ ಮಾಹಿತಿ ಬಂದಿದ್ದು, ಈ ಕುರಿತು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಲಾಗುತ್ತದೆ. |ಜಯರಾಮ್, ಡಿಡಿಪಿಯು, ರಾಯಚೂರು