ರಾಯಚೂರು: ಚಿಕ್ಕಸುಗೂರು ಕಲಾದೇವಿ ಕಲಾಬಳಗ ಹವ್ಯಾಸಿ ನಾಟ್ಯ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಎಡೆದೊರೆ ನಾಡಿನ ಸಾಂಸ್ಕೃತಿಕ ಉತ್ಸವದ ವತಿಯಿಂದ ಎರಡು ದಿನಗಳ ಕಾಲ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ನರಸಿಂಹ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಅ.26, ರಂದು ಚಿಕ್ಕಸುಗೂರು ಮಹಾದೇವ ಹಳ್ಳಿ ವಿರಚಿತ ‘ಧರ್ಮದ ತವರು’ ಹಾಗೂ ಅ.27 ರಂದು ಎ.ಟಿ.ಪಾಟೀಲ್ ವಿರಚಿತ ‘ಧರ್ಪದ ದೊರೆ’ ಎಂಬ ಸಾಮಾಜಿಕ ನಾಟಕಗಳನ್ನು ಸಂಜೆ 6 ಗಂಟೆಗೆ ನಗರದ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಮೊದಲ ದಿನದ ಉದ್ಘಾಟನಾ ಸಮಾರಂಭವನ್ನು ಗ್ರಾಮೀಣ ಶಾಸಕಬಸನಗೌಡ ದದ್ದಲ್ ಉದ್ಘಾಟಿಸಲಿದ್ದು, ಎರಡನೇ ದಿನದ ಕಾರ್ಯಕ್ರಮವನ್ನು ಮಾಜಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಷೀರುದ್ದಿನ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಲಾ ಕ್ಷೇತ್ರದಲ್ಲಿ ಸಾಧನೆಗೈದ ಹತ್ತು ಜನ ಕಲಾವಿದರಿಗೆ ಸನ್ಮಾನಿಸಲಾಗುವುದು. ಜತೆಗೆ ರಂಗಗೀತೆ, ಭಾವಗೀತೆ, ಭಕ್ತಿಗೀತೆ ಸುಗಮ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಶಾಲಂ, ರಾಜಗೋಪಾಲ, ಡುಳ್ಳಯ್ಯ, ಮೋಹನ್ ಸೇರಿದಂತೆ ಇತರರಿದ್ದರು.