ರಾಯಚೂರು: ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಡಿ.3ರಂದು ಸಂಜೆ 5ಕ್ಕೆ ಡಾ.ಶಿವರಾಜಕುಮಾರ ಅಭಿನಯದ 125ನೇ ಚಿತ್ರ ವೇದ ಚಲನ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿ.ಜೆ.ಇಂಟರ್‌ನ್ಯಾಷನಲ್ ಪ್ರೊಡಕ್ಷನ್ ಮುಖ್ಯಸ್ಥ ವೀರೇಂದ್ರ ಜಲ್ದಾರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ನಟ ಶಿವರಾಜಕುಮಾರ್, ನಿರ್ದೇಶಕ ಹರ್ಷ ಹಾಗೂ ಇತರ ನಟ, ನಟಿಯರು ಪಾಲ್ಗೊಳ್ಳಲಿದ್ದಾರೆ. ನೃತ್ಯ, ಗಾಯನ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೇಶದ ವಿವಿಧೆಡೆ ಇದುವರೆಗೂ 600ಕ್ಕೂ ಹೆಚ್ಚು ಕಾರ್ಯಕ್ರಮ ಆಯೋಜನೆ ಮಾಡಿದ್ದು, ಶಿವರಾಜಕುಮಾರ 125ನೇ ಚಲನಚಿತ್ರಕ್ಕೆ ಸಂಬಂಧಿಸಿ ಕಾರ್ಯಕ್ರಮ ಮಾಡಲು ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಾಗಿದೆ ಎಂದರು.
ಆನಂದ ಸಿನಿಮಾದಿಂದ ವೇದ ಚಲನಚಿತ್ರದವರೆಗೆ ಶಿವರಾಜಕುಮಾರರ ಚಿತ್ರಗಳ ನೃತ್ಯಗಳ ಪ್ರದರ್ಶನ ಮಾಡಲಾಗುವುದು. ಜತೆಗೆ ಕನ್ನಡ ಚಲನಚಿತ್ರ ರಂಗ ನಡೆದು ಬಂದ ದಾರಿಯನ್ನು ತೋರಿಸಲು ಪ್ರಯತ್ನಿಸಲಾಗುವುದು. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ ಎಂದು ಹೇಳಿದರು. ಕಲಾವಿದ ವಿಶ್ವಾಸ ಜಲ್ದಾರ್ ಉಪಸ್ಥಿತರಿದ್ದರು.