ರಾಯಚೂರು: ದೇಶದಲ್ಲಿ ಹಲವು ಸಮಸ್ಯೆಗಳಿದ್ದು, ಬೆಲೆ ಏರಿಕೆ ಹಾಗೂ ನಿರುದ್ಯೋಗ ಪ್ರಮುಖವಾಗಿವೆ. ಇದರಿಂದ ಬಡಜನರು ನರಕಯಾತನೆ ಅನುಭವಿಸುತ್ತಿದ್ದು, ನಿರುದ್ಯೋಗ ಹಾಗೂ ಬೆಲೆ ಏರಿಕೆ ಖಂಡಿಸಿ ಮಂಗಳೂರಿಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಶೇಕ್ ಫರೀದ್ ಉಮರಿ ಹೇಳಿದರು.
ದೇಶದಲ್ಲಿ ಬಡ ಜನರು ಬಳಸುವ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಆದಾಯ ಪಾತಳಕ್ಕೆ ಕುಸಿದಿದೆ. ಜತೆಗೆ ಯುವಕರಿಗೆ ಉದ್ಯೋಗ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ದೇಶದೆಲ್ಲಡೆ ಆಹಾಕಾರ, ನಿರುದ್ಯೋಗ, ಬೆಲೆ ಏರಿಕೆಗೆ ಎಂದು ಪರಿಹಾರ? ಎನ್ನುವ ಘೋಷವಾಕ್ಯದಡಿ ದೇಶಾದ್ಯಂತ ಆಂದೋಲನ ಆರಂಭವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಆಂದೋಲನದ ನಿಮಿತ್ತ ಕಲಬುರಗಿಯಿಂದ ಮಂಗಳೂರಿನವರೆಗೂ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ.
ಅ.17ಕ್ಕೆ ಜಾಥಾ ಜಿಲ್ಲೆಗೆ ಆಗಮಿಸಲಿದ್ದು, ನಗರದ ಪ್ರಮುಖ ವೃತ್ತಗಳು, ಸ್ಥಳಗಳಲ್ಲಿ ಸಭೆಗಳನ್ನು ನಡೆಸಲಾಗುವುದು. ಅಂದು ಸಂಜೆ ಮಾನ್ವಿ ಮೂಲಕ ಸಿಂಧನೂರಿಗೆ ಜಾಥಾ ತೆರಳಲಿದೆ ಎಂದು ಶೇಕ್ ಫರೀದ್ ಉಮರಿ ಹೇಳಿದರು. ಉಪಾಧ್ಯಕ್ಷ ಅಬ್ದುಲ್ ಘನಿ, ಪ್ರಧಾನ ಕಾರ್ಯದರ್ಶಿ ಅನ್ಸರ್ ಹುಸೇನ್, ನಗರಾಧ್ಯಕ್ಷ ಫಾರೂಕ್ ಮುನಿಯಾರ್, ಅಬ್ದುಲ್ ಲತೀಫ್ ಸಾಬ್ ಇದ್ದರು.