ಜಿಲ್ಲೆ

ರಾಯಚೂರು ಜಿಲ್ಲೆಯಲ್ಲಿ ಪೆಟ್ರೋಲ್ ಬಂಕ್ ಬಂದ್, ಅಗತ್ಯ ಸೇವೆಗಳು ಲಭ್ಯ ; ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಮನವಿ

ರಾಯಚೂರು: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿರುವ ಜನತಾ ಕರ್ಫ್ಯೂಗೆ ಜನರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ತಿಳಿಸಿದರು. ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ಸಾರ್ವಜನಿಕರು ಮನೆಯಿಂದ ಹೊರ ಬರದೇ ಕರೊನಾ ವಿರುದ್ಧ ಹಮ್ಮಿಕೊಂಡಿರುವ ಕಾರ್ಯಗಳಿಗೆ ಬೆಂಬಲ ವ್ಯಕ್ತಪಡಿಸಬೇಕು. ಅತ್ಯಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬರುವಂತೆ ಸಲಹೆ ನೀಡಿದರು.

ಬಸ್ ಸಂಚಾರವಿರುತ್ತಿದ್ದು, ಹೊರಗಡೆಯಿಂದ ಜಿಲ್ಲೆಗೆ ಆಗಮಿಸುವವರನ್ನು ಥರ್ಮಲ್ ಸ್ಕಾೃನರ್ ಮೂಲಕ ಪರಿಶೀಲಿಸಲಾಗುತ್ತಿದೆ. ಜನರು ಕೂಡ ಜಿಲ್ಲೆಯಿಂದ ಹೊರಹೋಗುವುದನ್ನು ನಿಲ್ಲಿಸುವ ಮೂಲಕ ಜಿಲ್ಲಾಡಳಿತಕ್ಕೆ ಸಹಕರಿಸಬೇಕು. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಇನ್ನಿತರ ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಲಾಗುತ್ತಿದೆ. ಪೆಟ್ರೋಲ್ ಬಂಕ್ ಮಾಲೀಕರು ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಲು ನಿರ್ಧರಿಸಿದ್ದು, ಪೆಟ್ರೋಲ್ ಬಂಕ್‌ಗಳನ್ನು ಬಂದ್ ಮಾಡಲಾಗುತ್ತಿದೆ. ಆಂಬುಲೆನ್ಸ್, ಅಗ್ನಿಶಾಮಕ ವಾಹನ ಸೇರಿ ಇನ್ನಿತರ ವಾಹನಗಳಿಗೆ ಮುಂಚಿತವಾಗಿ ಇಂಧನ ತುಂಬಿಸಿಕೊಳ್ಳುವಂತೆ ತಿಳಿಸಲಾಗಿದ್ದು, ಒಂದೆರಡು ಪೆಟ್ರೋಲ್ ಬಂಕ್ ತೆಗೆದಿರಿಸುವಂತೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ತಿಳಿಸಿದರು.