ಜಿಲ್ಲೆ

ಜಿಲ್ಲಾ ಉತ್ಸವಕ್ಕೆ ದೀರ್ಘ ಗ್ರಹಣ: ಹದಿನೆಂಟು ವರ್ಷಗಳ ಸಂಭ್ರಮ ಯಾವಾಗ?

Gangavati - Shashidhara Shashidhara

ರಾಯಚೂರು: ರಾಜ್ಯದ ಆಯಾ ಜಿಲ್ಲೆಗಳ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯನ್ನು ಪಸರಿಸಲು ಜಿಲ್ಲಾ ಉತ್ಸವಗಳನ್ನು ಸರ್ಕಾರದಿಂದ ಮಾಡಲಾಗುತ್ತದೆ. ಆದರೆ ರಾಯಚೂರು ಜಿಲ್ಲೆಯ ಉತ್ಸವಕ್ಕೆ ಕಳೆದ 18 ವರ್ಷಗಳಿಂದ ಗ್ರಹಣ ಹಿಡಿದಿದ್ದು, ಉತ್ಸವ ಮಾಡುವ ಬಗ್ಗೆ ಆಸಕ್ತಿಯನ್ನೂ ಸರ್ಕಾರ ತೋರದಿರುವುದು ಜಿಲ್ಲೆಯ ಸಾಹಿತಿಗಳ, ಚಿಂತಕರ ಅಸಮಧಾನಕ್ಕೆ ಕಾರಣವಾಗಿದೆ.

ರಾಯಚೂರು ಜಿಲ್ಲೆಯು ಇತಿಹಾಸ ಮತ್ತು ಸಾಹಿತಿಕ ವಲಯದಲ್ಲಿ ಬಹುದೊಡ್ಡ ಸಂಪತ್ತನ್ನು ಹೊಂದಿದ್ದು, ಸಂಗೀತ, ಸಾಹಿತ್ಯ, ಸಂಸ್ಕೃತಿ ಹಾಗೂ ನೈಸರ್ಗಿಕವಾಗಿ ಸಮೃದ್ಧತೆಯಿಂದ ಕೂಡಿದೆ. ಆದರೆ ಜಿಲ್ಲೆಯಲ್ಲಿರುವ ಸಂಪತ್ತನ್ನು ಉಳಿಸುವ, ಜಗತ್ತಿಗೆ ಪರಿಚಯಿಸುವ ಕೆಲಸಗಳು ಮಾತ್ರ ಹಿನ್ನೆಡೆ ಕಾಣುತ್ತಿವೆ.

ಜಿಲ್ಲೆಯಲ್ಲಿರುವ ಕೋಟೆ, ಕೊತ್ತಲುಗಳು, ಶಾಸನಗಳು, ಇಲ್ಲಿನ ಕಲಾವಿದರ ಸಾಧನೆಗಳು, ಕವಿಗಳ ಭಾವನೆಗಳು ಹಾಗೂ ಅವರ ಬರಹಗಳನ್ನು ಪ್ರತಿಬಿಂಬಿಸುವಂತಹ ಕಾರ್ಯವನ್ನು ಸಂಬಂಧಪಟ್ಟ ಇಲಾಖೆಗಳು ಮಾಡಬೇಕಾಗಿದೆ. ಆದರೆ ಸರ್ಕಾರ ಈ ಬಗ್ಗೆ ಯೋಚಿಸದೇ ಹಿಂದುಳಿದ ಜಿಲ್ಲೆಯೆಂಬ ಹಣೆಪಟ್ಟಿಯನ್ನು ಶಾಶ್ವತವಾಗಿ ಕಟ್ಟುವ ಕಾರ್ಯವಾಗುತ್ತಿದೆ ಎಂಬುದು ಜಿಲ್ಲೆಯ ಜನರ ಮನಸ್ಸಿನಲ್ಲಿ ಬೇಸರವನ್ನುಂಟು ಮಾಡಿದೆ.

ಇತ್ತೀಚೆಗೆ ಸಿಂಧನೂರಿನಲ್ಲಿ ದಸರಾ ಉತ್ಸವವನ್ನು ಸರ್ಕಾರದಿಂದ ಅತ್ಯಂತ ಅದ್ದೂರಿಯಾಗಿ ಮಾಡಿರುವುದು ಅತ್ಯಂತ ಸಂತಸದ ವಿಚಾರವಾಗಿದೆ. ಆದರೆ ಕೇವಲ ಒಂದು ಪ್ರದೇಶಕ್ಕೆ ಸೀಮಿತಗೊಳಿಸದೇ ಇಡೀ ಜಿಲ್ಲೆಯನ್ನು ಪರಿಗಣನೆಗೆ ತೆಗೆದುಕೊಂಡು ಜಿಲ್ಲೆಯಲ್ಲಿ ಪ್ರತಿವರ್ಷ ಜಿಲ್ಲಾ ಉತ್ಸವವನ್ನು ಮಾಡಬೇಕಾಗಿರುವುದು ಅತ್ಯಂತ ಮುಖ್ಯವಾಗಿದೆ.

ಸಿಂಧನೂರಿನಲ್ಲಿ ಮಾಡಲಾದ ದಸರಾ ಉತ್ಸವಕ್ಕೆ 1.5 ಕೊಟಿ ವೆಚ್ಚ ಮಾಡಲಾಗಿದೆ. ಇದೇ ರೀತಿಯಲ್ಲಿ ಪ್ರತಿ ವರ್ಷ ರಾಯಚೂರು ಜಿಲ್ಲಾ ತ್ಸವಕ್ಕೆ ಅನುಧಾನ ನೀಡಿದ್ದಲ್ಲಿ ಜಿಲ್ಲಾ ಉತ್ಸವವನ್ನು ಅದ್ದೂರಿಯಾಗಿ ಮಾಡಬಹುದಾಗಿದ್ದು, ಸಿಂಧನೂರು ಉತ್ಸವವನ್ನು ಮಾಡಿ ಜಿಲ್ಲಾ ಉತ್ಸವ ಮಾಡದೇ ಜಿಲ್ಲೆಯನ್ನು ಕಡೆಗಣಿಸಿ ಸರ್ಕಾರ ಕೈತೊಳೆದುಕೊಂಡಿದೆ ಎಂಬ ಅನುಮಾನ ಜಿಲ್ಲೆಯ ಜನರಲ್ಲಿ ಮೂಡಿದೆ.

ಹಂಪಿ, ಆನೆಗೊಂದಿ, ಕಿತ್ತೂರು ಸೇರಿದಂತೆ ಅನೇಕ ಕಡೆಗಳಲ್ಲಿ ಆಯಾ ಜಿಲ್ಲೆಯ ಐತಿಹಾಸಿಕತೆಯನ್ನು ಸಾರುವ ಉದ್ದೇಶದಿಂದ ಉತ್ಸವಗಳನ್ನು ಮಾಡಲಾಗುತ್ತದೆ. ಆಸರೆ ರಾಯಚೂರು ಜಿಲ್ಲೆಯಲ್ಲಿ ಜಿಲ್ಲಾ ಉತ್ಸವ ಮಾಡಲು ಸರ್ಕಾರ ನಿರ್ಲಕ್ಷೃ ತೋರುತ್ತಿದೆ.

ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆಯಲು ನಿರಾಸಕ್ತಿ ತೋರುತ್ತಿರುವರೇ ಎಂಬ ಅನುಮಾನ ಮೂಡುತ್ತಿದೆ. 2006ರಲ್ಲಿ ರಾಯಚೂರು ಜಿಲ್ಲಾ ಉತ್ಸವವನ್ನು ಮಾಡಲಾಗಿತ್ತು. ಆ ಸಂದರ್ಭದಲ್ಲಿ ಜಿಲ್ಲೆಯ ಸ್ಥಳೀಯ ಕಲಾವಿದರ ಪ್ರತಿಭೆಗಳನ್ನು ಹಾಗೂ ಸಾಹಿತ್ಯವನ್ನು ವಿಸ್ತಾರಗೊಳಿಸಲಾಗಿತ್ತು. ಅದಾದ ನಂತರ ಒಂದು ವರೆ ದಶಕಕ್ಕೂ ಹೆಚ್ಚಿನ ಸಮಯ ಕಳೆದುಹೋಗಿದ್ದು, ಈವರೆಗೂ ಜಿಲ್ಲಾ ಉತ್ಸವದ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ.

ಜಿಲ್ಲಾ ಉತ್ಸವದಿಂದ ಅನೇಕ ಕಲಾವಿದರಿಗೆ ಅವರ ಪ್ರತಿಭೆಯನ್ನು ಗುರುತಿಸಿಕೊಳ್ಳಲು ವೇದಿಕೆ ನಿಡಿದಂತಾಗುತ್ತದೆ. ಅಲ್ಲದೇ ಜಿಲ್ಲೆಯ ಇತಿಹಾಸವನ್ನು ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಿದಂತಾಗುತ್ತದೆ.
ವಿಶಿಷ್ಟವಾದ ಕಲೆಗಳನ್ನು ಹೊಂದಿದ ರಾಯಚೂರು ಜಿಲ್ಲೆಯನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಜಿಲ್ಲೆಯನ್ನು ಹಿಂದುಳಿದ ಜಿಲ್ಲೆ ಎಂದು ನೋಡುವ ದೃಷ್ಠಿಕೋನ ಬದಲಾಗಿ, ಮುಂದುವರೆಸಬಹುದಾದ ಜಿಲ್ಲೆ ಎಂದು ನೋಡಿದಾಗ ಅತ್ಯಂತ ಎತ್ತರದ ಸ್ಥಾನಕ್ಕೆ ಜಿಲ್ಲೆ ತಲುಪುತ್ತದೆ ಎಂದು ಜಿಲ್ಲೆಯ ಸಾಹಿತಿಗಳ ಮಾತಾಗಿದೆ.

ಜಿಲ್ಲೆಯ ಐತಿಹಾಸಿಕತೆಯನ್ನು ದಾಖಲಿಸುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡುತ್ತಿವೆಯೇ ಹೊರತು ಸರ್ಕಾರ ಈ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಇಲ್ಲಿನ ನಾಯಕರೂ ಕೂಡ ಅದರ ಮುಂದಾಳತ್ವವನ್ನು ವಹಿಸಿಕೊಳ್ಳುತ್ತಿಲ್ಲ.
2006ರಲ್ಲಿ ಜಿಲ್ಲಾ ಉತ್ಸವವನ್ನು ಮಾಡಲಾಗಿತ್ತು ಅದಾದ ನಂತರ 2016 ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಗಿದೆ ಇದನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಹಬ್ಬದ ಕಳೆ ಮತ್ತೆಂದೂ ಕೂಡ ಕಂಡುಬಂದಿಲ್ಲ.

ರಾಯಚೂರು ಜಿಲ್ಲೆಯಲ್ಲಿರುವ ಕೋಟೆಗಳಿಗೆ ಅಭಿವೃದ್ಧಿ ಭಾಗ್ಯ ಇನ್ನೂ ಒದಗಿಬಂದಿಲ್ಲ. ರಾಯಚೂರು ಜಿಲ್ಲೆಯನ್ನು ಕೋಟೆಗಳಿಂದಲೇ ಗುರುತಿಸುತ್ತಾರೆ ಆದರೆ ಕೋಟೆಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಇಲ್ಲಿನ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಮುಂದಾಗುತ್ತಿಲ್ಲ. ಕೋಟೆಗಳನ್ನು ಸಚಿವರು ಬಂದಾಗ ಅಥವಾ ಕಾರ್ಯಕ್ರಮದ ದಿನಗಳಲ್ಲಿ ಮಾತ್ರ ಸ್ವಚ್ಛಗೊಳಿಸಲಾಗುತ್ತದೆ. ಆದರೆ ಕೊಟೆಗೆ ನಿರಂತರ ನಿರ್ವಹಣೆಯ ಅವಶ್ಯಕತೆ ಇದೆ.

ರಾಯಚೂರು ಜಿಲ್ಲಾ ಉತ್ಸವವನ್ನು ಮಾಡಲು ಸರ್ಕಾರ ಮುಂದಾಗಬೇಕಾಗಿದೆ. ಜತೆಗೆ ಜಿಲ್ಲೆಯ ಜನಪ್ರತಿನಿಧಿಗಳು ಜಿಲ್ಲಾಉತ್ಸವ ಮಾಡುವ ವಿಚಾರವನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸವನ್ನು ಮಾಡಬೇಕಾಗಿದೆ.

ರಾಯಚೂರು ಜಿಲ್ಲೆಯಲ್ಲಿ ಅನೇಕ ರಾಜಮನೆತನಗಳು ಆಳ್ವಿಕೆ ಮಾಡಿದ್ದು, ರಾಯಚೂರು ಕೋಟೆಗಳ ನಾಡು ಎಂದು ಕರೆಯಲಾಗುತ್ತದೆ. ಸರ್ಕಾರ ಜಿಲ್ಲಾ ಉತ್ಸವ ಮಾಡುವ ನಿರ್ಧ್ರಾವನ್ನು ಕೈಗೊಳ್ಳುವುದಾದರೇ ಅದನ್ನು ಕೊಟೆ ಉತ್ಸವ ಎಂದು ಮಾಡಬೇಕು ಎನ್ನುವ ಕೂಗು ಜಿಲ್ಲೆಯ ಸಾಹಿತಿಗಳಿಂದ ಕೇಳಿಬರುತ್ತಿದೆ.