oplus_2 
ಜಿಲ್ಲೆ

ಜಿಲ್ಲಾದ್ಯಂತ ರಾಯಚೂರು ಬಂದ್‌ಗೆ ಸ್ಪಂದನೆ: ಒಳಮೀಸಲಾತಿ ಶೀಘ್ರ ಜಾರಿಗೆ ಒತ್ತಾಯ

Gangavati - Shashidhara Shashidhara

ರಾಯಚೂರು: ಒಳ ಮೀಸಲಾತಿ ಜಾರಿ ಮಾಡದ ರಾಜ್ಯ ಸರ್ಕಾರದ ವಿರುದ್ಧ ಐಕ್ಯ ಹೋರಾಟ ಸಮಿತಿಯಿಂದ ಪ್ರತಿಭಟನೆ ಹಾಗೂ ರಾಯಚೂರು ಬಂದ್‌ಗೆ ಗುರುವಾರ ಜಿಲ್ಲೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತ್ತಿದ್ದು, ಜಿಲ್ಲೆ ಸಂಪೂರ್ಣ ಸ್ಥಬ್ಧವಾಗಿತ್ತು.

ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಐಕ್ಯ ಹೋರಾಟ ಸಮಿತಿಯಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ದಲಿತಪರ ಹಾಗೂ ಇತರೆ ಸಂಘಟನೆಗಳು ಭಾಗವಹಿಸಿ ಹೋರಾಟಕ್ಕೆ ಸಾಥ್ ನಿಡಿದರು.

ನಗರದ ಮುಖ್ಯ ರಸ್ತೆಗಳ ಮೂಲಕ ಡಾ.ಬಿ.ಆರ್ ಅಂಬೇಡ್ಕರ್ ವೃತ್ತಕ್ಕೆ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ, ಸರ್ಕಾರದ ವಿರುದ್ಧ ಘೊಷಣೆಗಳನ್ನು ಹಾಕಲಾಯಿತು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 151 ಉಪಜಾತಿಗಳಿಗೆ ಆಯಾ ಜಾತಿ ಜನಸಂಖ್ಯಾವಾರು ಮೀಸಲಾತಿಯನ್ನು ಘೊಷಿಸಿ ರಾಜ್ಯ ಸರ್ಕಾರಕ್ಕೆ ಒಳಮೀಸಲಾತಿ ಜಾರಿ ಮಾಡಲು ಸುಪ್ರಿಂ ಕೋರ್ಟ್ ಅಧಿಕಾರ ನಿಡಿದ್ದು ಆದರೆ ಸರ್ಕಾರ ಮಿಸಲಾತಿಯನ್ನು ಜಾರಿಗೊಳಿಸದೇ ವಿಳಂಬ ಮಾಡುತ್ತಿದೆ. ಸುಪ್ರಿಂ ಕೋರ್ಟ್ ಆದೇಶವನ್ನೂ ಲೆಕ್ಕಿಸದೇ ಒಳಮೀಸಲಾತಿ ಜಾರಿಗಾಗಿ ಸಲಹೆ ಮಡೆಯಲು ಸರ್ಕಾರ ತಜ್ಞರ ಮೊರೆ ಹೋಗಿ ಸಮಿತಿ ರಚನೆ ಮಾಡುತ್ತಾ ಕಾಲಹರಣ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಪ್ರತಿಭಟನಾ ಸ್ಥಳಕ್ಕೆ ಡಿಸಿ ಕೆ.ನಿತೀಶ್ ಆಗಮಿಸಿ ಮನವಿಪತ್ರ ಸ್ವೀಕರಿಸಿದರು. ಬಂದ್ ಹಿನ್ನೆಲೆಯಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ವರ್ತಕರು ರಾಯಚೂರು ಬಂದ್‌ಗೆ ಬೆಂಬಲ ಸೂಚಿಸಿದರು.

ರಾಯಚೂರು ಕೇಂದ್ರ ಬಸ್ ನಿಲ್ದಾಣ

ಒಳಮೀಸಲಾತಿ ಹೋರಾಟದ ಹಿನ್ನೆಲೆಯಲ್ಲಿ ರಾಯಚೂರು ನಗರದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಕೇಂದ್ರ ಬಸ್ ನಿಲ್ದಾಣವು ಬಸ್ ಹಾಗೂ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು. ದೂರದ ಊರುಗಳಿಗೆ ಹೋಗಲು ಜನರು ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿ ಬಸ್ ಇಲ್ಲದಿರುವುದನ್ನು ಕಂಡು ವಾಪಸ್ಸಾದರು. ಪ್ರತಿಭಟನೆ ಆರಂಭವಾಗುವುದಕ್ಕೂ ಮೊದಲು ತಮ್ಮ ಊರುಗಳಿಗೆ ತೆರಳಲು ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋದರು. ಪ್ರತಿಭಟನೆ ವೇಳೆ ಸಂಚಾರ ಸಂಪೂರ್ಣ ಸ್ಥಗಿತವಾದ್ದರಿಂದ ಆಟೋ ಸಿಗದೇ ಪರದಾಡಿದರು.

ಬಸ್ ನಿಲ್ದಾಣ ಸ್ವಚ್ಛಗೊಳಿಸುತ್ತಿರುವ ಕೆಕೆಆರ್‍‍ಟಿಸಿ‌ ಸಿಬ್ಬಂದಿ

ರಾಯಚೂರು ಬಂದ್ ಹಿನ್ನೆಲೆಯಲ್ಲಿ ರಾಯಚೂರಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಇಲ್ಲದ ಕಾರಣ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಲಾಯಿತು. ಜನರಿರುವಾಗ ಸ್ವಚ್ಛ ಮಾಡಲು ಕಷ್ಟವಾಗುವ ಕಾರಣ ಇಂದು ಬಂದ್ ಹಿನ್ನೆಲಯಲ್ಲಿ ಖಾಲಿ ಖಾಲಿಯಾಗಿದ್ದ ನಿಲ್ದಾಣವನ್ನು ಸ್ವಚ್ಛಗೊಳಿಸಲಾಯಿತು.