ರಾಯಚೂರಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೃಷಿ ಡಿಪ್ಲೊಮಾ ಪದವಿ ಪ್ರದಾನ ಸಮಾರಂಭವನ್ನು ಐಸಿಎಆರ್ ನಿರ್ದೇಶಕ ಡಾ. ವಿಲಾಸ ಟೊಣಪಿ ಉದ್ಘಾಟಿಸಿದರು. 
ಜಿಲ್ಲೆ

ಕೃಷಿ ಡಿಪ್ಲೋಮಾ ಪಡೆಯಲು ಉತ್ಸಾಹಕರಾಗುವಂತೆ ಪರಿಕರ ಮಾರಾಟಗಾರರಿಗೆ ಡಾ.ವಿಲಾಸ ಸಲಹೆ

ರಾಯಚೂರು: ಕೃಷಿ ಪರಿಕರ ಮಾರಾಟಗಾರರು ಕೃಷಿ ಡಿಪ್ಲೊಮಾ ಕೋರ್ಸ್ ಪಡೆದುಕೊಂಡು ತಮ್ಮ ಕೆಲಸ ಆರಂಭಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಐಸಿಎಆರ್ ಹಾಗೂ ಐಐಎಂಆರ್ ನಿರ್ದೇಶಕ ಡಾ. ವಿಲಾಸ ಟೊಣಪಿ ಸಲಹೆ ನೀಡಿದರು.

ಸ್ಥಳೀಯ ವೀರಶೈವ ಕಲ್ಯಾಣ ಮಂಟಪದಲ್ಲಿ ಧಾರವಾಡ, ರಾಯಚೂರು ಕೃಷಿ ವಿಜ್ಞಾನ ವಿವಿ, ಕೃಷಿ ಇಲಾಖೆ, ಕೃಷಿ ತಂತ್ರಜ್ಞಾನ ಸಂಸ್ಥೆಯಿಂದ ಶನಿವಾರ ಹಮ್ಮಿಕೊಂಡಿದ್ದ ಕೃಷಿ ಡಿಪ್ಲೊಮಾ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕೃಷಿ ಪರಿಕರ ಮಾರಾಟಗಾರು ಪರಿಕರ ಮತ್ತು ಬಿತ್ತನೆ ಬೀಜ ಸೇರಿದಂತೆ ಇನ್ನಿತರ ಮಾಹಿತಿ ಪಡೆದುಕೊಂಡು ರೈತರಿಗೆ ಸಮರ್ಪಕ ಮಾಹಿತಿ ನೀಡಬೇಕು. ಕೃಷಿ ಡಿಪ್ಲೊಮಾ ಕೋರ್ಸ್‌ನ ಉದ್ದೇಶ ರೈತರಿಗೆ ಹೊಸ ತಂತ್ರಜ್ಞಾನ, ಬಿತ್ತನೆ ಬೀಜಗಳ ಬಗ್ಗೆ ಮಾಹಿತಿ ನೀಡುವುದಾಗಿದೆ ಎಂದರು.

2016ರಿಂದ ಡಿಪ್ಲೊಮಾ ಕೋರ್ಸ್ ಪದವಿ ಆರಂಭವಾಗಿದ್ದು, ಕೃಷಿ ಪರಿಕರಗಳ ಮಾರಾಟವೊಂದೇ ಅಲ್ಲದೆ ಕೃಷಿ ಇಲಾಖೆ, ಕೃಷಿ ವಿವಿಯ ನೂತನ ತಂತ್ರಜ್ಞಾನಗಳನ್ನು ರೈತರಿಗೆ ಮುಟ್ಟಿಸುವ ಕೆಲಸವನ್ನು ಪದವೀಧರರು ಮಾಡಬೇಕಾಗಿದೆ ಎಂದು ಹೇಳಿದರು.

ಧಾರವಾಡ ಕೃಷಿ ವಿಜ್ಞಾನಗಳ ವಿವಿ ನೋಡಲ್ ಅಧಿಕಾರಿ ಡಾ. ಎಂ.ಗೋಪಾಲ ಮಾತನಾಡಿ, ಕೃಷಿ ಪರಿಕರ ಮಾರಾಟಗಾರರಿಗೆ 11 ತಿಂಗಳ ಡಿಪ್ಲೊಮಾ ಕೋರ್ಸ್ ನಡೆಸಲಾಗುತ್ತಿದೆ. ಹೊಸ ಬ್ಯಾಚ್ ಇದೀಗ ಆರಂಭವಾಗಿದ್ದು, 40 ದಿನಗಳ ತರಗತಿ ನಡೆಸಲಾಗುತ್ತದೆ. ಇದರಲ್ಲಿ ಬೆಳೆ ಮಾಹಿತಿ, ಬೇಸಾಯ ಕ್ರಮ, ಕೀಟನಾಶಕಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದರು.

ರಾಯಚೂರು ಕೃಷಿ ವಿಜ್ಞಾನಗಳ ವಿವಿ ವಿಶ್ರಾಂತ ಕುಲಪತಿ ಡಾ. ಬಿ.ವಿ.ಪಾಟೀಲ್, ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಎಸ್.ಎಂ.ಸಿದ್ದಾರೆಡ್ಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ನಯೀಮ್ ಹುಸೇನ್, ಕೊಟ್ರೇಶಪ್ಪ ಕೋರಿ, ವೀರಣ್ಣ ಕಮತರ ಇತರರಿದ್ದರು.