ರಾಯಚೂರು: ಮನೆಯಲ್ಲಿ ನೀರು ಶೇಖರಣೆ ಮಾಡುವ ವಸ್ತುಗಳನ್ನು ಮುಚ್ಚಿಡಬೇಕು ಮತ್ತು ಸುತ್ತಮುತ್ತಲೂ ನೀರು ನಿಲ್ಲದಂತೆ ಸ್ವಚ್ಛತೆಯನ್ನು ಕಾಪಾಡುವ ಮೂಲಕ ಡೆಂಘೆ ತಡೆಗೆ ಜನರು ಸಹಕರಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಸುರೇಂದ್ರಬಾಬು ಹೇಳಿದರು.
ನಗರದ ನಿಜಲಿಂಗಪ್ಪ ಕಾಲನಿಯ ಎಟಿಎಂ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಡೆಂಘೆ ಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಡೆಂಘೆ ಜ್ವರಕ್ಕೆ ಕಾರಣವಾಗುವ ಈಡಿಸ್ ಸೊಳ್ಳೆಗಳ ಲಾರ್ವಗಳ ಉತ್ಪತ್ತಿ ತಡೆಯಲು ಸಾರ್ವಜನಿಕ ಬಾವಿ, ನೀರು ಸಂಗ್ರಹ ತೊಟ್ಟಿಗಳಲ್ಲಿ ಗಪ್ಪಿ ಮೀನುಗಳನ್ನು ಬಿಡಲಾಗುವುದು. ಸೊಳ್ಳೆಗಳ ನಿಯಂತ್ರಣಕ್ಕೆ ಗಪ್ಪಿ ಮೀನು ಸಹಕಾರಿಯಾಗಿವೆ. ಸೊಳ್ಳೆ ಕಡಿತದಿಂದ ರಕ್ಷಿಸಿಕೊಳ್ಳಲು ಜನರು ಇಲಾಖೆಯಿಂದ ನೀಡಲಾಗುವ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಲೇರಿಯಾ ನಿಯಂತ್ರಣಾಧಿಕಾರಿ ಡಾ,ಚಂದ್ರಶೇಖರಯ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಣೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಜ್ವಲ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಸಂಧ್ಯಾ, ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಸರೋಜ ಸೇರಿದಂತೆ ಇತರರಿದ್ದರು.