ರಾಯಚೂರು: ದೇಶದಲ್ಲಿ ಕರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುವ ಸಾಧ್ಯತೆಗಳಿದ್ದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಜ್ಞರು ಮತ್ತು ಸಂಸತ್ತಿನ ಸ್ಥಾಯಿ ಸಮಿತಿ 9 ತಿಂಗಳ ಹಿಂದೆ ನೀಡಿದ್ದ ಸಲಹೆಯನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದ್ದರಿಂದ ಕರೊನಾ ವ್ಯಾಪಕವಾಗಿ ಹರಡಿ ಜನರು ಪ್ರಾಣ ಕಳೆದುಕೊಳ್ಳುವಂತಹ ಸ್ಥಿತಿ ಉದ್ಭವವಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಕರೊನಾ ನಿಯಂತ್ರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೊಂದಲದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದು, ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ನಿರ್ಧಾರಗಳನ್ನು ಪ್ರಕಟಿಸುತ್ತಿವೆ. ಕರೊನಾ ನಿಯಂತ್ರಣಕ್ಕೆ ಲಸಿಕೆ ಪರಿಹಾರವಾಗಿದ್ದು, ಕೋವಿಡ್ ಲಸಿಕೆಯನ್ನು 20 ಕಂಪನಿಗಳು ತಯಾರಿಸುತ್ತಿದ್ದು, ಎರಡು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಸರ್ಕಾರ ಅಲ್ಲಿಂದ ಶೇ.50 ಲಸಿಕೆ ಪಡೆಯುತ್ತಿವೆ. ಆದರೆ, ದೇಶದ ಜನರಿಗೆ ಲಸಿಕೆ ನೀಡುವ ಬದಲು 95 ದೇಶಗಳಿಗೆ ಲಸಿಕೆ ನೀಡುತ್ತಿರುವುದರಿಂದ ದೇಶದಲ್ಲಿ ಲಸಿಕೆ ಕೊರತೆ ಉಂಟಾಗಿದೆ ಎಂದರು.
ರಾಜ್ಯದಲ್ಲಿ 94 ಕೋಟಿ 18 ವರ್ಷ ಮೇಲ್ಪಟ್ಟವರಿದ್ದಾರೆ. ಪ್ರಸ್ತುತ 18 ಕೋಟಿ ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಈಗ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವದಾಗಿ ಪ್ರಕಟಿಸಿದೆ. ಲಸಿಕೆ ಲಭ್ಯತೆಯೇ ಇಲ್ಲದಿರುವಾಗ ಮುಖ್ಯಮಂತ್ರಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆೆ. ಜಿಲ್ಲೆಯಲ್ಲಿ 16.50 ಲಕ್ಷ ಜನಸಂಖ್ಯೆಯಿದ್ದು, 2.22 ಲಕ್ಷ ಮುಖ್ಯ ವಾಹಿನಿಯಲ್ಲಿರುವವರಿಗೆ ಲಸಿಕೆ ಹಾಕಲಾಗಿದೆ. 1.30 ಲಕ್ಷ ಜನರು ಎರಡನೇ ಡೋಸ್‌ಗಾಗಿ ಕಾಯುತ್ತಿದ್ದಾರೆ. ಲಸಿಕೆ ಕೊರತೆಯನ್ನು ಮುಚ್ಚಿ ಹಾಕಲು ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳುವ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಎಲ್ಲದರ ಕೊರತೆಯಿದೆ. ಶವ ಸಂಸ್ಕಾರಕ್ಕೂ ಜನರು ಪರದಾಡಬೇಕಿದೆ. ಆದರೂ ರಾಜ್ಯ ಸರ್ಕಾರ ಸಮರ್ಥನೆಯಲ್ಲೇ ತೊಡಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿಯೂ ಗೊಂದಲವಿದೆ.
ಲಾಕ್‌ಡೌನ್ ಘೋಷಣೆಯಿಂದ ಕಾರ್ಮಿಕರು, ಬಡವರು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಕಾರ್ಮಿಕರು, ಬಡವರಿಗೆ ಜೀವನ ನಡೆಸಲು 10 ಸಾವಿರ ರೂ. ತಕ್ಷಣ ಬಿಡುಗಡೆ ಮಾಡಬೇಕು ಎಂದು ಎನ್.ಎಸ್.ಬೋಸರಾಜು ಒತ್ತಾಯಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ, ಮುಖಂಡರಾದ ಜಯಣ್ಣ, ಕೆ.ಶಾಂತಪ್ಪ, ಜಿಂದಪ್ಪ ಇದ್ದರು.