ರಾಯಚೂರು: ಜಿಲ್ಲೆಯ ಎರಡು ನಗರಸಭೆ, ಒಂದು ಪುರಸಭೆ, ಒಂದು ಪಟ್ಟಣ ಪಂಚಾಯತಿಯಲ್ಲಿ ತೆರವಾದ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಮಂಗಳವಾರ ಹೊರಬಿದಿದ್ದು, 2 ನಗರಸಭೆ ಹಾಗೂ ಹಟ್ಟಿಯಲ್ಲಿ ಎರಡು ಸ್ಥಾನಗಳು ಕಾಂಗ್ರೆಸ್ ಪಾಲಾಗಿದ್ದು, ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದಾರೆ.
ರಾಯಚೂರು ನಗರಸಭೆಯ ಸದಸ್ಯ ಸ್ಥಾನಕ್ಕಾಗಿ 31ನೇ ವಾರ್ಡ್‌ನಿಂದ ನಕಲಿ ಜಾತಿ ಪ್ರಮಾಣ ನೀಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರೇಣುಕಾ ಭಿಮರಾಯ ಸದಸತ್ವ ಅನರ್ಹಗೊಂಡ ಹಿನ್ನೆಲೆ ತೆರವಾದ ಸ್ಥಾನಕ್ಕೆ ಶನಿವಾರ ಉಪಚುನಾವಣೆ ಜರುಗಿತ್ತು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಂಜಿನಮ್ಮ ಶಾಮಸುಂದರ 282 ಮತಗಳ ಅಂತರಿಂದ ಗೆದ್ದಿದ್ದಾರೆ. ಬಿಜೆಪಿ ಅಭ್ಯರ್ಥಿ ಗಿರಿಜಾ ರಾಘವೇಂದ್ರ ಸೋತಿದ್ದಾರೆ.
ರಾಯಚೂರು ನಗರದ ತಹಶೀಲ್ದಾರ್ ಕಚೇರಿಯಲ್ಲಿ ಮತ ಎಣಿಕೆ ಪ್ರಕ್ರಿಯೆ ಜರುಗಿತು. ಒಟ್ಟು 2274 ಮತಗಳ ಪೈಕಿ ಅಂಜಿನಮ್ಮ 1268 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಬಿಜೆಪಿ ಅಭ್ಯರ್ಥಿ 986 ಮತಗಳನ್ನು ಪಡೆದಿದ್ದರು. ಇತರೆ 20 ಮತಗಳು ಹಂಚಿಕೆಯಾಗಿದ್ದವು.
ಚುನಾವಣಾಧಿಕಾರಿ ಬಿ.ವೈ.ವಾಲ್ಮೀಕಿ ಹಾಗೂ ರಾಯಚೂರು ತಹಸೀಲ್ದಾರ್ ಸುರೇಶ ವರ್ಮಾ ಫಲಿತಾಂಶ ಪ್ರಕಟಿಸಿದರು. ಗೆದ್ದ ಅಭ್ಯರ್ಥೀಗೆ ಪ್ರಮಾಣ ಪತ್ರ ವಿತರಿಸಿದರು.
ಮನ್ಸಲಾಪುರದಲ್ಲಿ ಗ್ರಾಮ ಪಂಚಾಯತಿಯ ವಾರ್ಡ್ ನಂ.2ರ ಸದಸ್ಯ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ರಾಘವೇಂದ್ರ ಬೋರೆಡ್ಡಿ ಗೆಲುವು ಸಾಧಿಸಿದರು. ಈ ಹಿಂದೆ ಇದ್ದ ಸದಸ್ಯ ಮೃತಪಟ್ಟ ಹಿನ್ನೆಲೆ ಉಪಚುನಾವಣೆ ನಡೆಸಲಾಗಿತ್ತು. 924 ಮತಗಳ ಪೈಕಿ ರಾಘವೇಂದ್ರಗೆ 527 ಮತಗಳು ಬಿದಿದ್ದು, ಉಳಿದಂತೆ ಬಸವರಾಜ್ 340, ಕೆ.ಹನುಮಂತ 18 ಮತಗಳನ್ನು ಪಡೆದಿದ್ದಾರೆ. 39 ಮತಗಳು ತಿರಸ್ಕೃತಗೊಂಡಿವೆ.