ರಾಯಚೂರು: ಹೆಚ್ಚಿನ ವರ್ಚಸ್ಸು ಇಲ್ಲದ ಮಹ್ಮದ್ ಶಾಲಂಗೆ ಕಾಂಗ್ರೆಸ್ ಟಿಕೆಟ್ ನೀಡಿದ ನಂತರ ಗೆಲುವು ನಮ್ಮದೇ ಎಂದು ಬೀಗುತ್ತಿದ್ದ ಬಿಜೆಪಿ ನಾಯಕರ ನಂಬಿಕೆಯನ್ನು ತಲೆಕಳೆಗಾಗುವಂತೆ ರಾಯಚೂರು ನಗರ ಕ್ಷೇತ್ರದಲ್ಲಿ ಸ್ಪರ್ಧೆ ಏರ್ಪಟ್ಟಿತ್ತು.
ಮತ ಎಣಿಕೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಶಿವರಾಜ ಪಾಟೀಲ್ ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ನಡುಕ ಉಂಟಾಗುವಂತೆ ಮಹ್ಮದ್ ಶಾಲಂ ಪೈಪೋಟಿ ನೀಡಿದರು.
ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿ ಗೆ ಜಿಲ್ಲೆಯ ಜನ ಫಿದಾ
ಮತ ಎಣಿಕೆ ಆರಂಭದ ಐದು ಸುತ್ತುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹ್ಮದ್ ಶಾಲಂ ಮುನ್ನಡೆ ಸಾಧಿಸಿದ್ದು, ನಂತರದ ಸುತ್ತುಗಳಲ್ಲೂ ಬಿಜೆಪಿ ಮುನ್ನಡೆ ಒಂದೆರಡು ಸಾವಿರ ಇದ್ದ ಕಾರಣ ಬಿಜೆಪಿ ಪಾಳಯಯಲ್ಲಿ ಆತಂಕ ಕಂಡುಬಂತು.
ಕೊನೆಯ ಮೂರು ಸುತ್ತುಗಳವರೆಗೂ ಅಂತರ ಹೆಚ್ಚಾಗದ ಕಾರಣ ಬಿಜೆಪಿ ಪಾಳಯದಲ್ಲಿ ಮುನ್ನಡೆ ಸಾಧಿಸಿದ್ದರೂ ಸಂತಸ ಕಂಡು ಬರಲಿಲ್ಲ. ಕೊನೆಗೆ 3,732 ಮತಗಳ ಅಂತರದಿಂದ ಡಾ.ಶಿವರಾಜ ಪಾಟೀಲ್ ಗೆಲುವು ಸಾಧಿಸಿದ ನಂತರ ಕಾರ್ಯಕರ್ತರು ಮತ್ತು ಅಭ್ಯರ್ಥಿ ಮುಖದಲ್ಲಿ ಸಂತಸ ಕಾಣುವಂತಾಯಿತು.
ಜಿಲ್ಲೆಯ ಇತರ ಕ್ಷೇತ್ರಗಳಿಗೆ ಹೋಲಿಸಿದಲ್ಲಿ ರಾಯಚೂರು ನಗರ ಕ್ಷೇತ್ರದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿದ್ದರೂ 2018ರ ಚುನಾವಣೆಗೆ ಹೋಲಿಸಿದಲ್ಲಿ ಮತದಾನ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಮುಸ್ಲಿಂ ಮತದಾರರು ಹೆಚ್ಚಿರುವ ಬೂತ್‌ಗಳಲ್ಲಿ ಹೆಚ್ಚಿನ ಮತದಾನವಾಗಿದ್ದು ಬಿಜೆಪಿ ಅಭ್ಯರ್ಥಿಯ ಆತಂಕಕ್ಕೆ ಕಾರಣವಾಗಿತ್ತು.
ನಗರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಸಮುದಾಯದ ಜನರು ಕಾಂಗ್ರೆಸ್ ಅಭ್ಯರ್ಥಿ ಮಹ್ಮದ್ ಶಾಲಂ ಗೆಲುವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಹೆಚ್ಚಿನ ಮತದಾನ ಮಾಡಿದ್ದರು. ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಪುತ್ರ ರವಿ ಬೋಸರಾಜು ಶಾಲಂ ಪರ ನಿರಂತರ ಪ್ರಚಾರ ನಡೆಸಿದ್ದು, ಕಾಂಗ್ರೆಸ್ ತೀವ್ರ ಸ್ಪರ್ಧೆ ನೀಡಲು ಕಾರಣವಾಗಿದೆ.
ಶಾಸಕ ಡಾ.ಶಿವರಾಜ ಪಾಟೀಲ್ ಬಗ್ಗೆ ಕ್ಷೇತ್ರದಲ್ಲಿ ಆರಂಭದಲ್ಲಿ ವಿರೋಧಿ ಅಲೆ ಕಂಡು ಬಂದಿತ್ತು. ನಂತರ ಅಸಮಾಧಾನ ಮರೆಯಾದಂತೆ ಕಂಡು ಬಂದಿದ್ದು ಗೆಲುವು ಸಾಧಿಸಲು ಸಾಧ್ಯವಾಗಿದೆ. ಹಿಂದುತ್ವ, ಕಾಂಗ್ರೆಸ್ ಅಭ್ಯರ್ಥಿ ವರ್ಚಸ್ವಿ ಅಲ್ಲ ಎನ್ನುವುದು ಕೂಡ ಗೆಲುವಿಗೆ ಕಾರಣವಾಗಿದೆ.
ಜೆಡಿಎಸ್ ಅಭ್ಯರ್ಥಿ ಈ.ವಿನಯಕುಮಾರ, ಎಸ್‌ಡಿಪಿಐನ ಸೈಯದ್ ಇಸಾಕ್ ಹುಸೇನ್, ಪಕ್ಷೇತರ ಅಭ್ಯರ್ಥಿ ಮುಜಿಬುದ್ದೀನ್ ಹೆಚ್ಚಿನ ಮುಸ್ಲಿಂ ಮತಗಳನ್ನು ಪಡೆಯುವಲ್ಲಿ ವಿಫಲವಾಗಿದ್ದು, ಬಿಜೆಪಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲು ಸಾಧ್ಯವಾಗದಂತಾಯಿತು.
ರಾಯಚೂರು ನಗರ ಕ್ಷೇತ್ರದಲ್ಲಿ ಇದುವರೆಗೂ ಯಾರೊಬ್ಬರೂ ಮೂರನೇ ಬಾರಿ ಗೆಲುವು ಸಾಧಿಸಿದ ಉದಾಹರಣೆಗಳಿಲ್ಲ. ಈ ಹಿಂದೆ ಕಾಂಗ್ರೆಸ್‌ನ ನಜೀರ್ ಅಹ್ಮದ್ ಸಿದ್ದಿಖಿ, ಸೈಯದ್ ಯಾಸೀನ್, ಎಂ.ಎಸ್.ಪಾಟೀಲ್ ಎರಡು ಬಾರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರೂ ಮೂರನೇ ಬಾರಿ ಕ್ಷೇತ್ರದ ಮತದಾರರು ಗೆಲುವು ನೀಡಿದ್ದಿಲ್ಲ. ಮೊದಲ ಬಾರಿ ಜೆಡಿಎಸ್‌ನಿಂದ, ಎರಡನೇ ಬಾರಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದ ಡಾ.ಶಿವರಾಜ ಪಾಟೀಲ್ ಮೂರನೇ ಬಾರಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲಿಗರಾಗಿದ್ದಾರೆ.
ತೀವ್ರ ಜಿದ್ದಾಜಿದ್ದಿಯಲ್ಲಿ ಗೆಲುವು ಸಾಧಿಸಿದ್ದರೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಪರಿಶ್ರಮ ಇದಕ್ಕೆ ಕಾರಣವಾಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ದುಡಿದದ್ದನ್ನು ಮತದಾರರು ಗುರುತಿಸಿದ್ದಾರೆ. ವಿಮಾನ ನಿಲ್ದಾಣ, ಬೈಪಾಸ್, ಟೆಕ್ಸ್‌ಟೈಲ್ ಪಾರ್ಕ್ ಕಾಮಗಾರಿ ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು.| ಡಾ.ಶಿವರಾಜ ಪಾಟೀಲ್, ಶಾಸಕ, ರಾಯಚೂರು ನಗರ