ಜಿಲ್ಲೆ

ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷನಿಂದ ಕರ್ತವ್ಯಲೋಪ: ಜಿಲ್ಲಾ ಸಮಿತಿ ವಿಸರ್ಜನೆ: ಎಂ.ವಸಂತ

ರಾಯಚೂರು: ಜಿಲ್ಲಾ ಛಲವಾದಿ ಮಹಾಸಭಾದ ಕಾರ್ಯಕಾರಿ ಸಮಿತಿಯನ್ನು ವಿಸರ್ಜನೆ ಮಾಡುವ ಕುರಿತು ರಾಜ್ಯ ಸಮಿತಿಯಿಂದ ಆದೇಶ ಬಂದಿದ್ದು, ಅದರಂತೆ ಜಿಲ್ಲಾ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಲಾಗುವುದು ಎಂದು ಮಹಾಸಭಾದ ರಾಜ್ಯ ನಿರ್ದೇಶಕ ಎಂ.ವಸಂತ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಛಲವಾದಿ ಮಹಾಸಭಾದ ಹಾಲಿ ಜಿಲ್ಲಾಧ್ಯಕ್ಷ ಕೆ.ನಾಗಲಿಂಗಸ್ವಾಮಿ ಸರಿಯಾಗಿ ಕಾರ್ಯ ನಿರ್ವಹಿಸದೇ, ಸದಸ್ಯತ್ವದ ಹಣವನ್ನು ರಾಜ್ಯ ಸಮಿತಿಗೆ ಸಂದಾಯ ಮಾಡದೇ ಜತೆಗೆ ರಾಜ್ಯ ಸಮಿತಿಯ ನೋಟೀಸ್‌ಗಳಿಗೆ ಉತ್ತರ ನೀಡದೇ ಕರ್ತವ್ಯಲೋಪ ಮಾಡಿದ್ದಾರೆ ಎಂದು ಆರೋಪಿಸಿದರು.

ಕೆ.ನಾಗಲಿಂಗಸ್ವಾಮಿ ನಡೆಯನ್ನು ರಾಜ್ಯ ಸಮಿತಿ ಖಂಡಿಸಿ ಜಿಲ್ಲಾ ಕಾರ್ಯಕಾರಿ ಸಮಿತಿಯನ್ನು ತೆಗೆದು ಹಾಕಿ ಪುನರ್ ರಚಿಸಲು ಆದೇಶ ಮತ್ತು ಅಧಿಕಾರ ನೀಡಿದ್ದು, ಜಿಲ್ಲಾ ಘಟಕವನ್ನು ನಿಷ್ಕ್ರೀಯಗೊಳಿಸಿ ಸಮಾಜದವರಿಂದಿಗೆ ಸಭೆ ನಡೆಸಿ ಶೀಘ್ರವೇ ಹೊಸ ಜಿಲ್ಲಾ ಸಮಿತಿಯನ್ನು ರಚನೆ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಶಶಿಧರ, ಯಲ್ಲಪ್ಪ, ಸಿದ್ದಪ್ಪ, ಚಿನ್ನರಾಯಡು, ಪಾರ್ತಸಾರಥಿ ಸೇರಿದಂತೆ ಇತರರಿದ್ದರು.