ಜಿಲ್ಲೆ

ರಸ್ತೆ ತಡೆದು ಪ್ರತಿಭಟನೆ: ಬಿಜೆಪಿ ಶಾಸಕನನ್ನು ವಶಕ್ಕೆ ಪಡೆದ ಪೊಲೀಸರು

ರಾಯಚೂರು: ನಗರದ ಸಂತೋಷನಗರ ಬಡಾವಣೆಯಲ್ಲಿದ್ದ ಶಿವ, ಗಣೇಶ ದೇವಸ್ಥಾನವನ್ನು ಮಂಗಳವಾರ ತಡರಾತ್ರಿ ಜಿಲ್ಲಾಡಳಿತದಿಂದ ತೆರವುಗೊಳಿಸಿದ್ದನ್ನು ವಿರೋಧಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದ ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ದೇವಸ್ಥಾನ ಮರು ನಿರ್ಮಾಣಕ್ಕೆ ಒತ್ತಾಯಿಸಿ ಉದ್ಯಾನದ ಮುಂದೆ ರಸ್ತೆ ತಡೆ ನಡೆಸುತ್ತಿದ್ದ ಸಂದರ್ಭದಲ್ಲಿ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಸೇರಿದಂತೆ ಬಿಜೆಪಿ ಪ್ರಮುಖರನ್ನು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆಗೊಳಿಸಿದರು.

ಸರ್ಕಾರಿ ಶಾಲೆ ನಿರ್ಮಾಣಕ್ಕಾಗಿ ಇರಿಸಲಾಗಿದ್ದ ಸಿಎ ಸೈಟ್‌ನಲ್ಲಿ ಅಕ್ರಮವಾಗಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಶಾಲೆ ಕಟ್ಟಡ ನಿರ್ಮಾಣ ಮಾಡುವ ಉದ್ದೇಶದಿಂದ ದೇವಸ್ಥಾನವನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ನಿತೀಶ ಹೊರಡಿಸಿದ್ದ ಆದೇಶದ ಮೇರೆಗೆ ತಡರಾತ್ರಿ 1.30ಕ್ಕೆ ತೆರವು ಕಾರ್ಯಚರಣೆ ನಡೆಸಲಾಗಿತ್ತು.